ಕನ್ನಡಪ್ರಭವಾರ್ತೆ ಹಾಸನ
ಕಳೆದ ವರ್ಷ ಡಿ.೩೧ ರಂದು ಕುಮಾರಸ್ವಾಮಿ ಎಂಬುವರು ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ನಂತರ ವಾಪಸ್ ೨೦೨೬ರ ಜ.೫ ರಂದು ವಾಪಸ್ ಬಂದಿದ್ದು, ಮನೆ ಬಾಗಿಲ ಬೀಗ ಮುರಿದಿರುವುದು ಕಂಡುಬಂದಿದೆ. ನಂತರ ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿದ್ದ ₹೧೫ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ಕಂಡುಬಂದಿದೆ. ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಶ್ವಾನ ದಳದ ಜೊತೆ ಬೆರಳಚ್ಚುಗಾರರು ಆಗಮಿಸಿದರು. ಆದರೇ ಕಳ್ಳತನವಾಗಿ ತುಂಬ ದಿನವಾಗಿದ್ದರಿಂದ ಶ್ವಾನ ದಳ ಕಂಡುಹಿಡಿಯಲು ಸಾಧ್ಯವಾಗದೆ ವಾಪಸ್ ಹೋಯಿತು. ನಂತರ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡರು.ಕಳ್ಳತನವಾದ ಮನೆಯ ಮಾಲೀಕ ಕುಮಾರಸ್ವಾಮಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಡಿ.31 ರಂದು ಬೆಂಗಳೂರಿಗೆ ತೆರಳಿದ್ದೆವು. ಕುಟುಂಬದವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಲ್ಲಿಯೇ ವಾಸವಾಗಿದ್ದೆವು. ಜ.೫ ರಂದು ಸೋಮವಾರ ಮನೆಗೆ ವಾಪಸ್ ಬಂದಾಗ ಕಳ್ಳತನವಾಗಿರುವುದು ಗೊತ್ತಾಯಿತು ಎಂದರು. ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಕೆಲಸ ಮಾಡಿ ೨೦೧೦ರಲ್ಲಿ ನಿವೃತ್ತರಾಗಿದ್ದೇನೆ ಎಂದು ತಿಳಿಸಿದರು. ಕುಮಾರಸ್ವಾಮಿ ಅವರ ಪತ್ನಿ ಉಮಕುಮಾರಸ್ವಾಮಿ ಮಾತನಾಡಿ, ಡಿ.೩೧ರಂದು ಬೆಂಗಳೂರಿನ ನನ್ನ ಅಕ್ಕನ ಮನೆಗೆ ಹೋಗಿ ಸೋಮವಾರ ಸಂಜೆ ೪ ಗಂಟೆ ಸುಮಾರಿಗೆ ಮನೆಗೆ ಬಂದಾಗ ಬಾಗಿಲು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಎಲ್ಲಾ ಚಿನ್ನ, ಬೆಳ್ಳಿ ಒಡವೆಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದರು. ಕಳ್ಳತನವಾದ ಚಿನ್ನಾಭರಣಗಳಲ್ಲಿ ಕರೀಮಣಿ ಚೈನ್, ಲಕ್ಷ್ಮೀ ಡಾಲರ್, ಮುತ್ತಿನ ನೆಕ್ಲೆಸ್, ಪ್ಲೇನ್ ಲಾಂಗ್ ನೆಕ್ಲೆಸ್, ಎರಡು ಹರಳಿನ ಉಂಗುರ, ಒಂದು ಡೈಮಂಡ್ ಉಂಗುರ, ಅಮೇರಿಕನ್ ಡೈಮಂಡ್ ಉಂಗುರ, ಮಕ್ಕಳ ಉಂಗುರಗಳು, ಚಿನ್ನದ ಓಲೆ, ಜುಮುಕಿ, ಕೆಂಪಿನ ಓಲೆ, ಮುತ್ತಿನ ಹಾಗೂ ಹವಳದ ಓಲೆಗಳು, ಲಕ್ಷ್ಮೀ ಕಾಸು, ೧೫ ಗ್ರಾಂ ತೂಕದ ಚಿನ್ನದ ಸರ ಸೇರಿದಂತೆ ಸುಮಾರು ೨೦ ತಲಾ ಚಿನ್ನಾಭರಣಗಳು ಸೇರಿವೆ ಎಂದು ಹೇಳಿದರು.ಇದಲ್ಲದೆ ಬೆಳ್ಳಿಯ ದೊಡ್ಡ ತಟ್ಟೆ, ಚೊಂಬು, ಬಟ್ಟಲುಗಳು, ಪಂಚಪಾತ್ರೆ, ಉದ್ಧರಣೆ, ಚಮಚಗಳು, ಕಟೋರಿ, ದೊಡ್ಡ ಹಾಗೂ ಚಿಕ್ಕ ದೀಪದ ಕಂಬಗಳು, ಆರತಿ ತಟ್ಟೆ, ಬೆಳ್ಳಿ ಕಾಲುಚೈನ್‌ಗಳು, ಉಡದಾರ, ಹಲಗಾರತಿ, ಕುಂಕುಮ ಡಬ್ಬಿ, ಬೆಳ್ಳಿಯ ಲೋಟಗಳು ಹಾಗೂ ಲೇಡಿಸ್ ವಾಚ್‌ಗಳು ಸೇರಿ ಬೆಳ್ಳಿ ವಸ್ತುಗಳನ್ನೂ ಕಳ್ಳರು ಕಳವು ಮಾಡಿದ್ದಾರೆ. ಮದುವೆ ಸಮಯದಲ್ಲಿ ನಮ್ಮಮ್ಮ ಮಾಡಿಸಿಕೊಟ್ಟ ಎಲ್ಲಾ ಆಭರಣಗಳೂ ಕಳವಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಘಟನೆ ಕುರಿತು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.