ಕನ್ನಡಪ್ರಭ ವಾರ್ತೆ ಬೆಳಗಾವಿ
ಕಳೆದ 24 ಗಂಟೆಗಳಿಂದ ಬೆಳಗಾವಿ ನಗರ ಸೇರಿದಂತೆ ಇತರೆಡೆ ಸುರಿಯುತ್ತಿದ್ದ ಮಳೆಯು ತುಸು ಬಿಡುವು ಕೊಟ್ಟಿದೆ. ಆದರೆ ಆಗಾಗ ತುಂತುರು ಮಳೆ ಮಾತ್ರ ಜಿನುಗುತ್ತಲೆ ಇದೆ. ಇದರ ನಡುವೆಯೂ ಕೆಲವೆಡೆ ಅನಾಹುತಗಳು ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಹಲವರು ಪಾರಾಗಿದ್ದಾರೆ.ಬೆಳಗಾವಿ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಮೂರು ಮನೆಗಳು ಧರೆಗೆ ಉರುಳಿವೆ. ಕಾಕತಿವೇಸ್‌ನಲ್ಲಿರುವ ಮನೆ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿ ಯಾರೂ ಇರದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪರಶುರಾಮ ಈಶ್ವರ ಕಾಂಬಳೆ ಎಂಬುವವರಿಗೆ ಸೇರಿದ ಮನೆ ನೆಲಸಮಗೊಂಡಿದೆ. ಕಾಂಬಳೆ ಕುಟುಂಬದ ಸದಸ್ಯರು ಮನೆಗೆ ಬೀಗ ಹಾಕಿ ಗೋಕಾಕ ಲಕ್ಷ್ಮೀ ಜಾತ್ರೆಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಪರುಶರಾಮ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದೆ. ಆದರೆ, ಈಗಿರುವ ಸೂರು ಕೂಡ ಬಿದ್ದಿರುವುದರಿಂದ ಆ ಕುಟುಂಬವು ಈಗ ಬೀದಿಗೆ ಬಿದ್ದಂತಾಗಿದೆ.ಗುರುವಾರ ಸಂಜೆ ಗೋಕಾಕ ಮಹಾಲಕ್ಷ್ಮೀ ಜಾತ್ರೆಗೆ ಹೋಗಿದ್ದೆವು. ಹೀಗಾಗಿ ಅವಘಡದಲ್ಲಿ ಬದುಕಿದ್ದೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಮತ್ತೊಂದೆಡೆ ಬೆಳಗಾವಿ ನಗರದ ಚವ್ಹಾಟ ಗಲ್ಲಿ, ಪಾಟೀಲ ಮಾಳಾ, ಗ್ಯಾಂಗ್ ವಾಡಿಯಲ್ಲಿ ಮನೆಗಳು ಧರೆಗೆ ಉರುಳಿವೆ. ಸ್ಥಳಕ್ಕೆ ಬೆಳಗಾವಿ ತಾಲೂಕಾಡಳಿತ, ಮಹಾನಗರ ಪಾಲಿಕೆ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಕುಸಿದ ರಸ್ತೆ, ಗೋವಾ ಪ್ರಯಾಣ ಅಪಾಯಕಾರಿ:ಖಾನಾಪುರ ತಾಲೂಕಿನಲ್ಲಿಯೂ ಭಾರೀ ಮಳೆಯಾಗುತ್ತಿರುವುದರಿಂದ ಸಾಕಷ್ಟು ಅನಾಹುತಗಳನ್ನು ತಂದಿದೆ. ತಾಲೂಕಿನ ಅನ್ಮೋಡ ಘಾಟ್‌ನಲ್ಲಿ ಬಿರುಕು ಬಿಟ್ಟು ರಸ್ತೆ ಕುಸಿದಿದೆ. ಹೀಗಾಗಿ ಸಂಚಾರ ಬಹಳ ದುಸ್ತರವಾಗಿದೆ. ಆದರೆ, ಈ ಅಪಾಯವನ್ನು ತಪ್ಪಿಸಲು ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ಮುಂದುವರಿಸಲಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಭಾರಿ ಮಳೆಯಿಂದಾಗಿ ಈ ಹೆದ್ದಾರಿಯ ಮೇಲೆ ರಸ್ತೆ ಕುಸಿದಿದೆ. ಆತಂಕ ವಿಚಾರವೆಂದರೆ ಪ್ರವಾಸಿಗರು ಅನ್ಮೋಡ್ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ವಾಹನದ ಸಂಚಾರದ ವೇಳೆ ಜಾಗೃತವಾಗಿರದಿದ್ದರೆ ಅನಾಹುತ ಎಡೆ ಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪ್ರತಿದಿನ ಸಾವಿರಾರು ಪ್ರವಾಸಿಗರು ಈ ಅನ್ಮೋಡ ಹೆದ್ದಾರಿ ಮೂಲಕವಾಗಿಯೇ ಸಂಚಾರ ಮಾಡುತ್ತಾರೆ.