ನಗರ ಸ್ವಚ್ಛವಾಗದೇ ಸ್ಮಾರ್ಟ್‌ಸಿಟಿ ಆಗಲು ಹೇಗೆ ಸಾಧ್ಯ?: ಸುಭಾಷ ಆಡಿ

KannadaprabhaNewsNetwork |  
Published : Jul 30, 2024, 12:32 AM IST
ಸಭೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಮಾತನಾಡಿದರು. | Kannada Prabha

ಸಾರಾಂಶ

ಪಾಲಿಕೆ ಅಧಿಕಾರಿಗಳು ಮೊದಲು ನಗರ ಸ್ವಚ್ಛತೆಗೆ ಆದ್ಯತೆ ನೀಡಿ ಆಗ ತನ್ನಿಂದ ತಾನೆಯೇ ಸ್ಮಾರ್ಟ್‌ ಸಿಟಿ ಆಗಲಿದೆ ಎಂದು ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹು-ಧಾ ಸಿಟಿ ಕ್ಲೀನ್‌ ಆಗಿರದೇ ಸ್ಮಾರ್ಟ್‌ ಸಿಟಿ ಹೇಗಾಗಲಿದೆ. ಪಾಲಿಕೆ ಅಧಿಕಾರಿಗಳು ಮೊದಲು ನಗರ ಸ್ವಚ್ಛತೆಗೆ ಆದ್ಯತೆ ನೀಡಿ ಆಗ ತನ್ನಿಂದ ತಾನೆಯೇ ಸ್ಮಾರ್ಟ್‌ ಸಿಟಿ ಆಗಲಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಹೇಳಿದರು.

ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ, ಹು-ಧಾ ಮಹಾನಗರ ಪಾಲಿಕೆ, ರೈಲ್ವೆ, ಎನ್‌‌ಡಬ್ಲೂಕೆಎಸ್ಆರ್‌‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತು ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ನಗರದ ಹಲವು ಕಡೆಗಳಲ್ಲಿ ಸಂಚರಿಸಿದ್ದೇನೆ. ಪುಟ್‌ಪಾತ್‌ಗಳೆಲ್ಲ ಸಂಪೂರ್ಣ ಹಾಳಾಗಿ ಹೋಗಿವೆ. ಎಲ್ಲೆಂದರಲ್ಲಿ ಕಸ ಸಂಗ್ರಹಗೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ಪುಟ್‌ಪಾತ್‌ ಮೇಲೆಯೇ ಡಬ್ಬಾ ಅಂಗಡಿಗಳನ್ನು ಇರಿಸಲಾಗಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಮಹಾನಗರದ ಎಲ್ಲ ಪುಟ್‌ಪಾತ್‌ಗಳ ದುರಸ್ತಿ, ಸ್ವಚ್ಛತೆಗೆ ಮೊದಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪುನರ್ ಬಳಕೆ ಪ್ಲಾಸ್ಟಿಕ್ ಹೆಚ್ಚಾಗಿ ಬಳಕೆ ಮಾಡಬೇಕು. ಪ್ಲಾಸ್ಟಿಕ್ ಘನ ತ್ಯಾಜ್ಯ, ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕಿದೆ. ಶಾಲೆಗಳಲ್ಲಿ ಹಸಿರು ಕ್ಯಾಂಪಸ್ ನಿರ್ಮಾಣ ಮಾಡಲು ಕ್ರಮ ವಹಿಸಬೇಕು. ಅದರಂತೆ ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಖಾಸಗಿ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯ, ಬ್ಯಾಂಕ್‌‌ಗಳು ಮುಂತಾದ ಕಡೆಗಳಲ್ಲೂ ಸಹ ಹಸಿರೀಕರಣ ನಿರ್ಮಾಣಕ್ಕೆ ಒತ್ತು ನೀಡಬೇಕು.

ರೈಲ್ವೆ ನಿಲ್ದಾಣಗಳಲ್ಲಿ ಹಸರೀಕರಣಕ್ಕೆ ಒತ್ತು ನೀಡಬೇಕು. ಅಲ್ಲದೇ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಪ್ರಯಾಣಿಕರಿಗೆ ಅರಿವು ಮೂಡಿಸಬೇಕಿದೆ. ಧ್ವನಿವರ್ಧಕಗಳ ಮೂಲಕ ರೈಲ್ವೆಗಳ ಬಗ್ಗೆ ಮಾಹಿತಿ ನೀಡುವಾಗ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ನೀಡಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಈಗಾಗಲೇ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿದ್ದ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೇ 10 ಟನ್‌‌ಗೂ ಅಧಿಕ ಪ್ಲಾಸ್ಟಿಕ್‌‌ ವಶಪಡಿಸಿಕೊಳ್ಳಲಾಗಿದೆ. ದಂಡವನ್ನು ಸಹ ವಿಧಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ:

ಬಸ್‌‌ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು. ಮಾದಕ ವಸ್ತುಗಳ ಸೇವಿಸುವವರಿಗೆ ದಂಡ ವಿಧಿಸುವ ಕುರಿತು ಬಸ್‌‌ಗಳಲ್ಲಿ ಅರಿವು ಮೂಡಿಸುವ ಜಾಹೀರಾತುಗಳನ್ನು ಅಳವಡಿಸಬೇಕು. ಬಸ್‌ ಸಂಚಾರದ ಮೇಲೆ ಜನರು ಹೆಚ್ಚಾಗಿ ಅವಲಂಬಿತರಾಗಿರುವುದರಿಂದ ಬಸ್‌‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿಗಳ ಮಾರಾಟ ತಡೆಗಟ್ಟಬೇಕು. ಅಲ್ಲದೇ ಪಿಒಪಿ ಗಣಪತಿ ತಯಾರಿಸುವ ಅಂಗಡಿಗಳನ್ನು ಮುಚ್ಚುವುದಾಗಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ. ಜನರು ಮಣ್ಣಿನ ಗಣಪತಿಗಳನ್ನು ಖರೀದಿಸುವಂತೆ ಪ್ರೇರೆಪಿಸಬೇಕು ಎಂದರು.

ಸಭೆಯಲ್ಲಿ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ