ಮುಂಡರಗಿ: ರಾಜ್ಯದಲ್ಲಿ 35 ಸಾವಿರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಹಾಗೂ 10 ಸಾವಿರ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇರುವಾಗ ಗುಣಮಟ್ಟದ ಶಿಕ್ಷಣ ಕೊಡಲು ಹೇಗೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಕೃಷಿ, ಕೈಗಾರಿಕೆ, ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ಚರ್ಚೆಯಾಗುವುದನ್ನು ನಾವು ನೋಡುತ್ತಿದ್ದೇವು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟದ ಕುರಿತು ಸಹ ಚರ್ಚೆಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ನಾಡಿನ ವಿವಿಧ ಸುದ್ದಿ ಪತ್ರಿಕೆಗಳಲ್ಲಿ ಶಿಕ್ಷಣದ ಗುಣಮಟ್ಟದ ಕುರಿತು ಆಯಾ ಪತ್ರಿಕೆಗಳ ಸಂಪಾದಕರು ಸಂಪಾದಕೀಯ ಬರೆಯುತ್ತಿದ್ದಾರೆ.
ಪ್ರಸ್ತುತ ಜ್ವಲಂತ ಸಮಸ್ಯೆ ಇದ್ದಾಗ ಮಾತ್ರ ಅದು ಸಂಪಾದಕೀಯದಲ್ಲಿ ಬರುತ್ತದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂದು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಈ ಕುರಿತು ಸರ್ಕಾರ ಹಾಗೂ ಅನೇಕ ಸಾರ್ವಜನಿಕ ಸಂಸ್ಥೆಗಳು ಅಧ್ಯಯನ ನಡೆಸಿ ವರದಿ ಕೊಟ್ಟಿದ್ದು, ಕೇಂದ್ರ ಸರ್ಕಾರದಡಿಯಲ್ಲಿರುವ ಎನ್ ಸಿಆರ್‌ಟಿ ವರದಿ ಪ್ರಕಾರ ನಮ್ಮ ಶಿಕ್ಷಣದ ಗುಣಮಟ್ಟ ಕುರಿತು ಪರಿಶೀಲನೆ ನಡೆಸಿದಂತೆ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ 5ನೇ ತರಗತಿಯ ವಿಜ್ಞಾನ, ಗಣಿತ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗುತ್ತಿಲ್ಲ ಎಂದು ವರದಿಯಲ್ಲಿದೆ.ಹೀಗಾದರೆ ನಮ್ಮ ಮಕ್ಕಳಿಗೆ ಹೇಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ. ಇವುಗಳ ಮಧ್ಯ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ 33 ಸಂಸ್ಥೆಗಳನ್ನು ನಡೆಸಿ ಲಕ್ಷಾಂತರ ಬಡ ಹಾಗೂ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ. ಸರ್ಕಾರ ಈ ಕೂಡಲೇ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ನಮ್ಮ 33 ವಿದ್ಯಾ ಸಮಿತಿಯಲ್ಲಿ ಸುಮಾರು 12 ರಿಂದ 13 ಸಂಸ್ಥೆಗಳು ಅನುದಾನಕ್ಕೆ ಒಳಪಡದೇ ಇರುವ ಶಾಲೆಗಳಿದ್ದು, ಆ ಎಲ್ಲ ಶಾಲೆಗಳ ಶಿಕ್ಷಕರಿಗೆ ಪ್ರತಿ ತಿಂಗಳು ₹7 ರಿಂದ 8 ಲಕ್ಷ ವೇತನವನ್ನು ಪ್ರತಿ ತಿಂಗಳು ನಮ್ಮ ಶ್ರೀಮಠದಿಂದ ಕೊಡಲಾಗುತ್ತಿದೆ. ಕಳೆದ ಅನೇಕ ವರ್ಷಗಳಿಂದ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಸರ್ಕಾರ ಅವುಗಳನ್ನು ತುಂಬಿಕೊಳ್ಳುತ್ತಿಲ್ಲ. ಹೀಗಿರುವಾಗ ಗುಣಮಟ್ಟದ ಶಿಕ್ಷಣ ಕೊಡಲು ಹೇಗೆ ಸಾಧ್ಯ ಎಂದು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿ, ಸರ್ಕಾರ ಕೂಡಲೇ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವಶಿಕ್ಷಕರನ್ನು ತುಂಬಿಕೊಳ್ಳದೇ ಇದ್ದಲ್ಲಿ ಮುಂಬರುವ ವರ್ಷಗಳಲ್ಲಿ ಸಂಸ್ಥೆಯನ್ನು ಮುಚ್ಚುವುದು ಅನಿವಾರ್ಯವಾಗುತ್ತದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಿಗೆ ಹಾಗೂ ಪ್ರತಿಭಾವಂತ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮಠದ ಉತ್ತರಾಧಿಕಾರಿ ಜ. ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಜಿ ನೇತೃತ್ವ ವಹಿಸಿದ್ದರು. ಆರ್.ಆರ್. ಹೆಗಡಾಳ, ಕರಬಸಪ್ಪ ಹಂಚಿನಾಳ, ಆರ್.ಎಲ್.ಪೊಲೀಸ್ ಪಾಟೀಲ, ವೀರನಗೌಡ ಗುಡದಪ್ಪನವರ, ಎಂ.ಎಸ್.ಶಿವಶೆಟ್ಟರ್, ಡಾ.ಅನ್ನದಾನಿ ಮೇಟಿ, ಜಯಣ್ಣ ಗುಜ್ಜಲ, ಸುರೇಶ ಮೇಟಿ, ಬಿಇಒ ಎಚ್.ಎಂ.ಪಡ್ನೇಸಿ, ಎಸ್.ಬಿ.ಹಿರೇಮಠ, ಯಾತ್ರಾ ಕಮೀಟಿ ಅಧ್ಯಕ್ಷ ವಿ.ಜೆ. ಹಿರೇಮಠ, ದೇವು ಹಡಪದ, ಶಿವು ವಾಲಿಕಾರ, ನಾಗರಾಜ ಮುರುಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಡಾ. ಬಿ.ಜಿ.ಜವಳಿ ಸ್ವಾಗತಿಸಿ, ಆರ್.ಎಚ್. ಜಂಗನವಾರಿ ಹಾಗೂ ದೀಪಶ್ರೀ ಕಣವಿ ನಿರೂಪಿಸಿದರು.