ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುಟ್ಟು ಹೋದರೆ ಬದಲಿಸಲು ಎಷ್ಟು ದಿನ ಬೇಕು: ಚಲುವರಾಯಸ್ವಾಮಿ

KannadaprabhaNewsNetwork |  
Published : Apr 08, 2025, 12:35 AM IST
7ಕೆಎಂಎನ್ ಡಿ18 | Kannada Prabha

ಸಾರಾಂಶ

ಎರಡು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿದ್ದವರಿಗೆ ತಾಲೂಕಿಗೆ ಕೇವಲ ಒಂದು ವಿದ್ಯುತ್ ವಿತರಣಾ ಕೇಂದ್ರ ತರಲು ಆಗಿಲ್ಲ. ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಹಲವು ಯೋಜನೆ ಆರಂಭಿಸಲು ಮತ್ತೆ ನಾನೇ ಅಧಿಕಾರಕ್ಕೆ ಬರಬೇಕಾಯಿತು. ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಟ್ರಾನ್ಸ್‌ಫಾರ್‍ಮರ್ ಕೆಟ್ಟರೆ ಕೇವಲ 24 ಗಂಟೆಯಲ್ಲಿ ಕೊಡಿಸುತ್ತಿದ್ದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಹಾನ್ ಯಜಮಾನರ ಅವಧಿಯಲ್ಲಿ ಒಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟುಹೋದರೆ ಬದಲಿಸಲು ಎಷ್ಟುದಿನ ಬೇಕಿತ್ತು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.

ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಶಿಥಿಲಗೊಂಡ ಹಳೆಯ ವಿದ್ಯುತ್ ಕಂಬ ಮತ್ತು ತಂತಿ ಬದಲಿಸಿ ಕೇಬಲ್ ಅಳವಡಿಸುವ 10 ಕೋಟಿ ರು.ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ಎರಡು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿದ್ದವರಿಗೆ ತಾಲೂಕಿಗೆ ಕೇವಲ ಒಂದು ವಿದ್ಯುತ್ ವಿತರಣಾ ಕೇಂದ್ರ ತರಲು ಆಗಿಲ್ಲ. ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಹಲವು ಯೋಜನೆ ಆರಂಭಿಸಲು ಮತ್ತೆ ನಾನೇ ಅಧಿಕಾರಕ್ಕೆ ಬರಬೇಕಾಯಿತು ಎಂದರು.

ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಟ್ರಾನ್ಸ್‌ಫಾರ್‍ಮರ್ ಕೆಟ್ಟರೆ ಕೇವಲ 24 ಗಂಟೆಯಲ್ಲಿ ಕೊಡಿಸುತ್ತಿದ್ದೆ. ಈಗಲೂ ಕೂಡ ಇಲಾಖೆಯ ಉಗ್ರಾಣದಲ್ಲಿ ಹೆಚ್ಚುವರಿಯಾಗಿ 100 ಟ್ರಾನ್ಸ್‌ಫಾರ್‍ಮರ್‌ಗಳನ್ನು ದಾಸ್ತಾನು ಮಾಡಿ ಕೆಟ್ಟುಹೋದ ತಕ್ಷಣ ಬದಲಿಸಲು ಕ್ರಮವಹಿಸಲಾಗಿದೆ ಎಂದರು.

ರೈತ ಕೃಷಿ ಪಂಪ್‌ಸೆಟ್‌ಗಳಿಗೆ ಈ ಬಾರಿ ಬೇಸಿಗೆ ಕಾಲದಲ್ಲಿಯೂ ಸಮರ್ಪಕ ವಿದ್ಯುತ್ ಪೂರೈಸುವ ಸಲುವಾಗಿ 2 ಕೋಟಿ ರು.ವೆಚ್ಚದಲ್ಲಿ 16 ಹೊಸ ಫೀಡರ್‌ ಚಾಲನೆಗೊಳಿಸಲಾಗಿದೆ. ಗ್ರಾಮೀಣ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸಲು ತಾಲೂಕಿನ ಅಂಚೆಚಿಟ್ಟನಹಳ್ಳಿ, ಬುರುಡುಗುಂಟೆ, ಮಾದಿಹಳ್ಳಿ, ಗೊಂಡೇನಹಳ್ಳಿ, ಬಾಳನಕೊಪ್ಪಲು ಮತ್ತು ಇರುಬನಹಳ್ಳಿ ಗ್ರಾಮಗಳಲ್ಲಿ ಹೊಸದಾಗಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.

ಹೆಚ್ಚಿನ ಜನಸಂದಣಿ ಸ್ಥಳ, ಪ್ರವಾಸಿ ತಾಣ, ದೇವಸ್ಥಾನ, ಶಾಲೆ ಕಾಲೇಜು ಸರ್ಕಾರಿ ಕಚೇರಿ ಸೇರಿದಂತೆ ಹೆಚ್ಚಿನ ಜನದಟ್ಟಣೆಯಿಂದ ಕೂಡಿರುವ ವಾಣಿಜ್ಯ ಮತ್ತು ವಸತಿ ಬಡಾವಣೆಗಳಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ತಂತಿಯನ್ನು ತೆರವುಗೊಳಿಸಿ ಕೇಬಲ್ ಅಳವಡಿಸಲಾಗುವುದು. ಇದರಿಂದ ವಿದ್ಯುತ್ ಅಪಘಾತ ತಪ್ಪಿಸಿ ಗುಣಮಟ್ಟ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಜೊತೆಗೆ ಪಟ್ಟಣದ ಸೌಂದರ್ಯವನ್ನೂ ಕೂಡ ಹೆಚ್ಚಿಸಿದಂತಾಗುತ್ತದೆ ಎಂದರು.

ಈ ವೇಳೆ ಮನ್ಮುಲ್ ನಿರ್ದೇಶಕ ಅಪ್ಪಾಜಿಗೌಡ, ಚಲುವರಾಯಸ್ವಾಮಿ ಪುತ್ರ ಸಚ್ಚಿನ್, ಪುರಸಭೆ ಅಧ್ಯಕ್ಷ ಅಲಿ ಅನ್ಸರ್‌ಪಾಷ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ತಿಮ್ಮಪ್ಪ, ಸಂಪತ್‌ಕುಮಾರ್, ಮುಖ್ಯಾಧಿಕಾರಿ ಶ್ರೀನಿವಾಸ್, ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಅಳೀಸಂದ್ರ ದಿನೇಶ್, ಸೆಸ್ಕಾಂ ಇಇ ಮಂಜುನಾಥ್, ನಾಗಮಂಗಲ ಉಪ ವಿಭಾಗದ ಎಇಇ ತಿಲಕ್, ಬೆಳ್ಳೂರು ಉಪ ವಿಭಾಗದ ಎಇಇ ಮಹದೇವ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ