ಕನ್ನಡಪ್ರಭ ವಾರ್ತೆ ಚಿತ್ತಾಪುರ
ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಆಯ್ಕೆ ಹಾಗೂ ಅಕ್ಕಿ ಕಳ್ಳನ ಪರವಾಗಿ ಉತ್ತರ ಪ್ರದೇಶದ ಸಿಎಂ ಯೊಗಿ ಆದಿತ್ಯನಾಥ ಪ್ರಚಾರ ಸೇರಿದಂತೆ ಹಲವಾರು ವಿಷಯಗಳಿಗಾಗಿ ಕಳೆದ ವಿಧಾನಸಭೆ ಚುನಾವಣೆ ರಾಷ್ಟ್ರದ ಗಮನ ಸೆಳೆದಿತ್ತು. ಮತ್ತೊಂದು ಕಡೆ ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ಜಾಸ್ತಿ ಪ್ರಚಾರಕ್ಕೆ ಬಂದಿರಲಿಲ್ಲಾ. ಆದರೂ ನೀವೆಲ್ಲ ಸೇರಿ ಪ್ರಚಾರ ಮಾಡಿ ನನ್ನ ಗೆಲ್ಲಿಸಿದ್ದಿರಿ. ನಿಮ್ಮ ಋನ ಯಾವ ರೀತಿ ತೀರಿಸಬೇಕೆಂದು ನನಗೆ ತಿಳಿಯುತ್ತಿಲ್ಲ ಎಂದು ಗ್ರಾಮೀಣಾಭಿವೃದಿ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭಾವುಕರಾಗಿ ಹೇಳಿದರು.ತಾಲೂಕಿನ ಕೊಲ್ಲೂರ ಗ್ರಾಮದಲ್ಲಿ ೨೦೧೮-೧೯ನೇ ಸಾಲಿನ ಡಿಎಂಎಫ್ ಯೊಜನೆಯಡಿ ಕೊಲ್ಲೂರ ಗ್ರಾಮದಿಂದ ಬನ್ನಟ್ಟಿಯವರೆಗೆ ₹೫.೭೦ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್ ಸಚಿವರಾಗಿ ಮುಂದಿನ ೫ ವರ್ಷದಲ್ಲಿ ಸಾಕಷ್ಟು ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು, ರಾಜ್ಯ ಸರ್ಕಾರ ಐದು ತಿಂಗಳಲ್ಲಿಯೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಎಂದರು.ಗ್ರಾಮೀಣ ಭಾಗದಲ್ಲಿ ಪ್ರತಿ ಗ್ರಾಪಂಗಳಿಗೆ ಹೈಬ್ರೀಡ್ ಲೈಬ್ರರಿ ನಿರ್ಮಾಣ ಮಾಡುವ ಗುರಿ ಇದ್ದು ಮುಂದಿನ ಎರಡು ವರ್ಷಗಳಲ್ಲಿ ಲೈಬ್ರರಿಗಳನ್ನು ಅರಿವು ಕೇಂದ್ರ ಎನ್ನುವ ಹೆಸರಿನಲ್ಲಿ ಸ್ಥಾಪಿಸಲಾಗುವುದು ಜೊತೆಗೆ ಬಸವ ತತ್ವದ ಮಾದರಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ರು.೨೫ ಲಕ್ಷ ಖರ್ಚು ಮಾಡಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಲಾಗುವುದು ಅಂತಹ ಶೌಚಾಲಯಗಳ ನಿರ್ವಹಣೆ ನೀವೇ ಮಾಡಿಕೊಳ್ಳಬೇಕು ಎಂದರು.
ಗ್ರಾಪಂ ಸಮರ್ಪಕ ನಿರ್ವಹಣೆ ಮಾಡುವ ಉದ್ದೇಶದಿಂದ ಪಂಚತಂತ್ರ ಭಾಗ-೨ ಅಡಿಯಲ್ಲಿ ಎಲ್ಲವೂ ಅನ್ ಲೈನ್ ಆಗುವಂತೆ ಜಾರಿಗೊಳಿಸಲಾಗುತ್ತಿದೆ. ಪಂಚಾಯ್ತಿಯ ಪ್ರತಿ ಸಭೆಗಳ ಕುರಿತು ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಸರಿಯಾಗಿ ಕೆಲಸ ಮಾಡದೇ ತಪ್ಪಿಸಿಕೊಳ್ಳುವ ಪಿಡಿಓಗಳಿಗೆ ಕಡಿವಾಣ ಹಾಕಲು ಇ- ಬಯೋ ಮೆಟ್ರಿಕ್ ವ್ಯವಸ್ಥೆಯಲ್ಲಿ ಅವರು ಥಂಬ್ ಹಾಕುವ ವ್ಯವಸ್ಥೆ ಮಾಡಲಾಗುವುದು. ಎಷ್ಟು ದಿನ ಕೆಲಸ ಮಾಡುತ್ತಾರೋ ಅಷ್ಟೆ ದಿನದ ಸಂಬಳ ನೀಡಲಾಗುವುದು ಎಂದರು.ವೇದಿಕೆಯಲ್ಲಿ ವಾಡಿ ಬ್ಲಾಕ್ ಅಧ್ಯಕ್ಷ ಮೆಹಮೂದ ಸಾಹೇಬ್, ನಾಗರೆಡ್ಡಿ ಪಾಟೀಲ್ ಕರದಾಳ, ಶಿವಾನಂದ ಪಾಟಿಲ್, ಅಜೀಜ್ ಸೇಠ, ಅರವಿಂದ ಚವ್ವಾಣ ಇತರರು ಇದ್ದರು.