ತುಂಗಭದ್ರಾ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳಲ್ಲಿ ಎಚ್‌.ಪಿ.ರಾಜೇಶ್‌ ಕೊಡುಗೆ ಅಪಾರ

KannadaprabhaNewsNetwork | Updated : Jul 13 2024, 11:57 AM IST

ಸಾರಾಂಶ

ಕ್ಷೇತ್ರದಲ್ಲಿ ಜಾರಿಯಾದ ಎರಡು ಮಹತ್ವದ ನೀರಾವರಿ ಯೋಜನೆಗಳಾದ 57  ಕೆರೆಗಳಿಗೆ ತುಂಗಭದ್ರಾ ನೀರು ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಕೊಡುಗೆ ಅಪಾರವಾಗಿದೆ 

 ಜಗಳೂರು :  ಕ್ಷೇತ್ರದಲ್ಲಿ ಜಾರಿಯಾದ ಎರಡು ಮಹತ್ವದ ನೀರಾವರಿ ಯೋಜನೆಗಳಾದ ೫೭ ಕೆರೆಗಳಿಗೆ ತುಂಗಭದ್ರಾ ನೀರು ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಕೊಡುಗೆ ಅಪಾರವಾಗಿದೆ ಎಂದು ಎಚ್.ಪಿ.ರಾಜೇಶ್ ಅಭಿಮಾನಿ ಬಳಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ , ಬಿಜೆಪಿ ಮುಖಂಡ ಕಾನನಕಟ್ಟೆ ಕೆ.ಎಸ್.ಪ್ರಭು ಹೇಳಿದರು.

ತಾಲೂಕಿನ ಬುಳ್ಳೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಶಾಸಕ ಎಚ್‌.ಪಿ.ರಾಜೇಶ್ ಅವರ ೫೯ನೇ ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಬುಕ್, ಪೆನ್ ವಿತರಿಸಿ ಅವರು ಮಾತನಾಡಿದರು.

೨೦೧೩ ರಿಂದ ೨೦೧೮ರ ವರೆಗಿನ ಅವರ ಆಡಳಿತ ಸುವರ್ಣ ಯುಗದಂತೆ ಇತ್ತು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಸಿ-ಎಸ್‌ಟಿ ಹಾಗೂ ಸಾಮಾನ್ಯ ವರ್ಗದ ಕಾಲೋನಿಗಳಿಗೆ ಸಿಸಿ ರಸ್ತೆಗಳು ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಗಳ ನಿರ್ಮಾಣ, 2 ಸಾವಿರ ರೈತರಿಗೆ ಭೂಮಿ ಹಕ್ಕುಪತ್ರ ವಿತರಣೆ, ಗ್ರಾಮ ವಿಕಾಸ ಯೋಜನೆಯಡಿ ಸಮಗ್ರ ಗ್ರಾಮ ಅಭಿವೃದ್ಧಿ , ಕೃಷಿ ಹೊಂಡ, ಪಾಲಿ ಹೌಸ್, ಪಶುಭಾಗ್ಯ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಎಚ್.ಪಿ.ರಾಜೇಶ್ ಅವರಿಗೆ ಸಲ್ಲುತ್ತದೆ ಎಂದರು.

ರಾಜೇಶ್‌ ಅವರ ಹುಟ್ಟುಹಬ್ಬವನ್ನು ಆಡಂಬರವಾಗಿ ಆಚರಿಸಿ, ಅನಗತ್ಯ ದುಂದು ವೆಚ್ಚದ ಬದಲು ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಎಚ್.ಪಿ.ಆರ್. ಅಭಿಮಾನಿ ಬಳಗದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಬಳಗದ ಮುಖಂಡ ಬಿ.ಲೋಕೇಶ್ ಮಾತನಾಡಿ, ಅಧಿಕಾರ ಇಲ್ಲದೇ ಇರಬಹುದು. ಆದರೆ, ಕ್ಷೇತ್ರದ ಮತದಾರರ ಅಭಿಮಾನ ಗಳಿಸಿರುವುದು ಅವರ ವ್ಯಕ್ತಿತ್ವ ಎತ್ತಿತೋರುತ್ತದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ಶುಭ ಕೋರಿದರು.

ಈ ಸಂದರ್ಭ ಎಚ್.ಪಿ.ಆರ್. ಅಭಿಮಾನಿ ಬಳಗದ ಮುಖಂಡರಾದ ಪಿ.ರೇವಣ್ಣ, ದೊಣ್ಣೆಹಳ್ಳಿ ನಾಗರಾಜಯ್ಯ, ತಿಪ್ಪೇಸ್ವಾಮಿ, ಹೊನ್ನೂರು ಸ್ವಾಮಿ, ಅಭಿಲಾಶ್, ಬುಳ್ಳನಹಳ್ಳಿ ಗಾದ್ರಿ ಲಿಂಗಪ್ಪ, ಹನುಮಂತಪ್ಪ, ರವಿಕುಮಾರ್, ಧನ್ಯಕುಮಾರ್, ಮುಖ್ಯಶಿಕ್ಷಕ ಟೀಪು ಸುಲ್ತಾನ್, ಶಿಕ್ಷಕಿಯರಾದ ಮೀನಾಕ್ಷಮ್ಮ, ಶಕುಂತಲಮ್ಮ, ಹಾಲಮ್ಮ ಇತರರು ಇದ್ದರು. 

Share this article