ಕನ್ನಡಪ್ರಭ ವಾರ್ತೆ ಹಾಸನ
ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಎಚ್ಚರ ಅಗತ್ಯ. ಇದರ ನಿಯಂತ್ರಣಕ್ಕೆ ಎಚ್.ಪಿ.ವಿ ಲಸಿಕೆ ಪಡೆಯುವುದು ಅಗತ್ಯ ಎಂದು ಸ್ತ್ರೀರೋಗ ತಜ್ಞೆ ಡಾ. ಭವ್ಯ ಸುನೀಲ್ ಹೇಳಿದರು.ನಗರದ ಹೊರವಲಯದ ಬೂವನಹಳ್ಳಿ ಕ್ರಾಸ್ ಬಳಿ ಇರುವ ಶ್ರೀ ರಂಗನಾಥಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಮಾತೃ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತಿರುವ ಗರ್ಭ ಕೊರಳ ಕ್ಯಾನ್ಸರ್ ಬಗ್ಗೆ ಎಲ್ಲಾ ಮಹಿಳೆಯರು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಅಸುರಕ್ಷಿತ ಲೈಂಗಿಕ ಕ್ರಿಯೆ, ಶುಚಿತ್ವದ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಮಹಿಳೆಯರಲ್ಲಿ ಗರ್ಭ ಕೊರಳ ಕ್ಯಾನ್ಸರ್ ಕಂಡುಬರುತ್ತಿದೆ. ಋತುಸ್ರಾವದ ವೇಳೆ ನೋವು, ಹಾಗೂ ಲೈಂಗಿಕ ಕ್ರಿಯೆ ಬೆಲೆ ರಕ್ತಸ್ರಾವದ ಲಕ್ಷಣಗಳು ಕಂಡುಬಂದಾಗ ಕೂಡಲೇ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯ. ಬಾಲ್ಯದಲ್ಲೇ ಎಚ್. ಪಿ.ವಿ ಲಸಿಕೆ ಪಡೆದಲ್ಲಿ ಇದರ ನಿಯಂತ್ರಣ ಸಾಧ್ಯ. ದೇಶದಲ್ಲಿ ಪ್ರತೀ 7-8 ನಿಮಿಷಕ್ಕೆ ಓರ್ವ ಮಹಿಳೆ ಗರ್ಭ ಕೊರಳ ಕ್ಯಾನ್ಸರ್ ನಿಂದ ಸವನ್ನಪ್ಪುತ್ತಿರುವ ಬಗ್ಗೆ ವರದಿಯಾಗಿದೆ ಎಂದು ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಹೆಚ್ಚಾಗಿ ಕಂಡುಬರುತ್ತಿದ್ದು, ಇದು ಅನುವಂಶೀಯವಾಗಿ ಬರುವ ಸಾಧ್ಯತೆ ಇದೆ. ಪ್ರತೀ ತಿಂಗಳು ಸ್ವಯಂ ಸ್ತನ ಪರೀಕ್ಷೆಯ ಬಳಿಕ ಸ್ಥಳೀಯ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು. ಇದಕ್ಕಾಗಿ ಹಲವು ತಪಾಸಣೆಗಳಿದ್ದು ಅವುಗಳ ಬಗ್ಗೆ ಎಲ್ಲರಿಗೂ ಮಾಹಿತಿ ಅಗತ್ಯ ಎಂದು ವಿವರಿಸಿದರು.ಸಂಸ್ಥೆಯ ಕಾರ್ಯದರ್ಶಿ ಮತ್ತು ವಕೀಲ ಬಿ.ವಿ ಶ್ರೀನಿವಾಸ್ ಮಾತನಾಡಿ, ಸಂಸ್ಥೆ ಸ್ಥಾಪನೆಯಾದ ದಿನದಿಂದ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಪೋಷಕರು ಮತ್ತು ಮಕ್ಕಳ ನಡುವೆ ಬಾಂಧವ್ಯ ಹೆಚ್ಚಿಸುವ ಸಲುವಾಗಿ ಈ ಮಾತೃ ಭೋಜನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಲ್ಲದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೂಡ ಸಂಸ್ಥೆ ಮುಂಚೂಣಿಯಲ್ಲಿದೆ ಎಂದರು.
ಈ ವೇಳೆ ಹಳೇಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಗೀತಾ, ಮುಖ್ಯ ಶಿಕ್ಷಕರು ಬಿ.ಡಿ. ಶಂಕರ್ ಗೌಡ, ಮುಖ್ಯ ಶಿಕ್ಷಕಿ ಸುಂದರಮ್ಮ ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.