ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಎಚ್‍ಪಿವಿ ಲಸಿಕಾ ಕಾರ್ಯಕ್ರಮದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲಸಿಕೆ ನೀಡುವ ಮುನ್ನ ಶಾಲಾ ಹಂತದಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆ ನಡೆಸಿ ಎಚ್‍ಪಿವಿ ಲಸಿಕೆಯ ಮಹತ್ವ ಹಾಗೂ ಅಗತ್ಯತೆ ಕುರಿತು ಅರಿವು ಮೂಡಿಸಬೇಕು. ಪೋಷಕರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಜಾಗೃತಿ ಮೂಡಿಸಬೇಕು. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಎಚ್‍ಪಿವಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಪಡೆಯಲು ಸುಮಾರು ರು 9 ಸಾವಿರದಿಂದ15 ಸಾವಿರದವರೆಗೂ ವೆಚ್ಚವಾಗುತ್ತದೆ. ಸರ್ಕಾರವು ಇದನ್ನು ಉಚಿತವಾಗಿ ನೀಡುತ್ತಿರುವಾಗ, ಅರ್ಹ ವಯಸ್ಸಿನ ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಲಸಿಕೆ ಕುರಿತು ತಪ್ಪು ಮಾಹಿತಿ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ಮಾತನಾಡಿ, ಮಹಿಳೆಯರನ್ನು ಕಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ 14 ವರ್ಷ ಪೂರೈಸಿದ ಮತ್ತು 15 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಎಚ್‍ಪಿವಿ ಲಸಿಕಾ ಅಭಿಯಾನದ ಫಲಾನುಭವಿಗಳೆಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 18,267 ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.
ನಿಗದಿತ ವಯೋಮಿತಿಗಿಂತ ಹೊರಗಿರುವವರು, ಗರ್ಭಿಣಿಯರು, ಈಗಾಗಲೇ ಬೇರೆ ಲಸಿಕೆ ಪಡೆದವರು, ಲಸಿಕೆಯಿಂದ ಅಲರ್ಜಿ ಇತಿಹಾಸ ಹೊಂದಿರುವವರು ಹಾಗೂ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಲಸಿಕೆ ನೀಡುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು 74 ವೈದ್ಯಾಧಿಕಾರಿಗಳು ಹಾಗೂ 423 ನರ್ಸಿಂಗ್ ಸಿಬ್ಬಂದಿ ಹಾಗೂ 292 ಪಿಹೆಚ್‍ಸಿಓ ಅವರು ಸಕ್ರಿಯಾಗಿ ಪಾಲ್ಗೊಳ್ಳುತ್ತಿದ್ದು, ಸಾರ್ವಜನಿಕರು ಈ ಸದಾವಕಾಶ ಬಳಸಿಕೊಂಡು ತಮ್ಮ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.