ಹುಬ್ಬಳ್ಳಿ: ಪ್ರತಿಪಕ್ಷದ ತೀವ್ರ ವಿರೋಧ, ಗಲಾಟೆಯ ನಡುವೆಯೇ ರಾಜ್ಯದ ಎರಡನೆಯ ದೊಡ್ಡ ಮಹಾನಗರವೆನಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನ ₹1512.67 ಕೋಟಿಗಳ ಬಜೆಟ್‌ನ್ನು ಮಂಡಿಸಿತು. ಕಳೆದ ಬಾರಿ ₹1491.75 ಕೋಟಿ ಗಾತ್ರ ಹೊಂದಿದ್ದ ಬಜೆಟ್ ಈ ಸಲ ಅದಕ್ಕಿಂತ ₹ 20.92 ಕೋಟಿಯಷ್ಟು ಗಾತ್ರ ಜಾಸ್ತಿಯಾಗಿದೆ. ಇನ್ನು ₹30.78ಲಕ್ಷಗಳ ಉಳಿತಾಯದ ಅಂದಾಜು ಮಾಡಲಾಗಿದೆ.
ಏನವು ಪಂಚಗುರಿ?: ಜಿಐಎಸ್ ಸರ್ವೆ ಮೂಲಕ ಆಸ್ತಿ ತೆರಿಗೆ ಇತರೆ ಆಂತರಿಕ ಸಂಪನ್ಮೂಲಗಳನ್ನು ಹೆಚ್ಚಿಸುವುದು. ಪಿಪಿಪಿ ಮಾದರಿಯಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಸುವುದು. ಶೇ. 100ರಷ್ಟು ಕಸ ಸಂಗ್ರಹಿಸಿ ಸಂಸ್ಕರಣೆ ಮಾಡುವ ಮೂಲಕ ಕಸಮುಕ್ತ ನಗರವನ್ನಾಗಿಸುವುದು. ಮೂಲಸೌಲಭ್ಯಗಳನ್ನು ಒದಗಿಸುವುದು. ಪ್ರಸಕ್ತ ಸಾಲಿನಲ್ಲೇ ನಿರಂತರ ಕುಡಿಯುವ ನೀರು ಪೂರೈಸುವುದು. ಇವೇ ಪಂಚ ಗುರಿಗಳನ್ನು ಪಾಲಿಕೆ ಇಟ್ಟುಕೊಂಡಿದೆ.
ಕಳೆದ ವರ್ಷ ಹತ್ತಾರು ಹೊಸ ಯೋಜನೆಗಳನ್ನು ಘೋಷಿಸಿತ್ತು. ಆದರೆ ಅವುಗಳನ್ನು ಈಡೇರಿಸಲು ಮಾತ್ರ ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಒಂದೇ ಒಂದು ಹೊಸ ಯೋಜನೆ ಹಾಕಿಕೊಳ್ಳುವ ಗೋಜಿಗೆ ಹೋಗಿಲ್ಲ. ಬದಲಿಗೆ ಇರುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿರ್ಧರಿಸಿದೆ.ಸಂಪನ್ಮೂಲ ಕ್ರೋಡೀಕರಣ: 2024-25ನೇ ಸಾಲಿನಲ್ಲಿ ಸುಮಾರು ₹130 ಕೋಟಿಗಳಷ್ಟು ಆಸ್ತಿ ತೆರಿಗೆ ವಸೂಲಿ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ, ದಂಡ ಹಾಗೂ ಇತರೆ ತೆರಿಗೆಗಳಿಂದ ₹303 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣಗೊಂಡ 1545 ಸ್ಟಾಲ್‌ಗಳನ್ನು ಹರಾಜು ಮಾಡುವ ಮೂಲಕ ಸುಮಾರು ₹20.75 ಕೋಟಿ, ನಗರ ಯೋಜನೆ ವಿಭಾಗದಿಂದ ಕಟ್ಟಡ ಪರವಾನಿಗೆ ಹಾಗೂ ಮುಕ್ತಾಯ ಪ್ರಮಾಣ ಪತ್ರ ನೀಡುವ ಮೂಲಕ ವಿವಿಧ ಶುಲ್ಕಗಳಿಂದ ₹ 79.90 ಕೋಟಿ ಆದಾಯದ ಗುರಿ ಹೊಂದಲಾಗಿದೆ.
ಆದರೆ ಯಾವೊಂದು ಹೊಸ ಯೋಜನೆಗಳನ್ನು ಘೋಷಿಸದೇ ಕಳೆದ ಬಾರಿ ಘೋಷಿಸಿರುವ ಯೋಜನೆಗಳೂ ಕಾರ್ಯರೂಪಕ್ಕೆ ಬಾರದಿರುವುದೇಕೆ? ಎಂಬ ಬಗ್ಗೆ ಸ್ಪಷ್ಟನೆ ನೀಡದೇ ಮಂಡಿಸಿದ ಬಜೆಟ್ ಒಂದು ಹಂತದಲ್ಲಿ ಸಪ್ಪೆಯಾಗಿತ್ತು ಎಂಬ ಟೀಕೆ ವ್ಯಕ್ತವಾಗುತ್ತಿರುವುದಂತೂ ಸತ್ಯ.