ಹುಬ್ಬಳ್ಯಾಗ ಮಳಿ ಬಂದ್ರ ನದಿಯಾಗ ಇದ್ದಂಗ ಆಗತೈತ್ರಿ

KannadaprabhaNewsNetwork |  
Published : Jun 14, 2025, 12:55 AM IST
ಫೋಟೋಮಳೆಯಿಂದ ಹಳ್ಳದಂತಾಗಿರುವ ಹುಬ್ಬಳ್ಳಿ ಧಾರವಾಡ ರಸ್ತೆ | Kannada Prabha

ಸಾರಾಂಶ

ಎರಡು ದಿನಗಳ ಹಿಂದೆಯಂತೂ ಇಡೀ ಊರಿಗೆ ಊರೇ ನದಿಯಂತಾಗಿತ್ತು. ದ್ವಿಚಕ್ರವಾಹನ ಸವಾರರು ಮುಂದೆ ಹೋಗಲು ಆಗದೇ ನಡುರಸ್ತೆಯಲ್ಲೇ ಅಂಗಡಿ, ಮುಂಗಟ್ಟುಗಳ ಕಟ್ಟೆಗಳ ಮೇಲೆ ನಿಂತು ರಾತ್ರಿ ಕಳೆದರು. ಮಳೆ ನಿಂತು ಎರಡ್ಮೂರು ಗಂಟೆಯಾದ ಮೇಲೆ ಮನೆ ಸೇರಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ: ನಮ್‌ ಹುಬ್ಬಳ್ಯಾಗ ನದಿನೂ ಇಲ್ಲ. ಡ್ಯಾಂ ಇಲ್ಲ. ಆದ್ರೂ ಯಾಕ್‌ ಮಳಿ ಬಂದ್ರ ನದ್ಯಾಗ ಇದ್ದಂಗ ಆಗತೈತಿ... ಇದಕ್ಕೆಲ್ಲ ಏನ್‌ ಕಾರಣ..!

ಇದು ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದಲ್ಲಿ ಸೃಷ್ಟಿಸಿರುವ ಆವಾಂತರಕ್ಕೆ ಹುಬ್ಬಳ್ಳಿಯಲ್ಲಿನ ಜನ ಪ್ರಶ್ನಿಸುತ್ತಿರುವ ಪರಿ. ಇದಕ್ಕೆ ಕಾರಣವೂ ಇಲ್ಲ. ಇಲ್ಲಿ ಯಾವುದೇ ನದಿನೂ ಇಲ್ಲ. ಆದರೂ ಒಂದೆರಡು ಗಂಟೆ ಮಳೆಯಾದರೆ ಪ್ರವಾಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ಎರಡು ದಿನಗಳ ಹಿಂದೆಯಂತೂ ಇಡೀ ಊರಿಗೆ ಊರೇ ನದಿಯಂತಾಗಿತ್ತು. ದ್ವಿಚಕ್ರವಾಹನ ಸವಾರರು ಮುಂದೆ ಹೋಗಲು ಆಗದೇ ನಡುರಸ್ತೆಯಲ್ಲೇ ಅಂಗಡಿ, ಮುಂಗಟ್ಟುಗಳ ಕಟ್ಟೆಗಳ ಮೇಲೆ ನಿಂತು ರಾತ್ರಿ ಕಳೆದರು. ಮಳೆ ನಿಂತು ಎರಡ್ಮೂರು ಗಂಟೆಯಾದ ಮೇಲೆ ಮನೆ ಸೇರಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕಾರುಗಳು ಸಹ ಮುಂದೆ ಸಾಗದೇ ನಿಂತಲ್ಲೇ ನಿಂತಿದ್ದವು. ಅವುಗಳನ್ನು ಮರುದಿನ ನೇರವಾಗಿ ಗ್ಯಾರೇಜ್‌ಗೆ ಕೊಂಡೊಯ್ಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಹಾಗಂತ ಆವತ್ತು ಮಳೆಯಾಗಿದ್ದೇನೂ ಕಡಿಮೆಯೇನಲ್ಲ. ಕುಂಭದ್ರೋಣ ಮಳೆಯೇ ಸುರಿದಿದೆ. ಆದರೂ ಇಷ್ಟೊಂದು ಅನಾಹುತ ಸೃಷ್ಟಿಸಲು ಪಾಲಿಕೆಯ ಪಾತ್ರವೂ ಬಹಳಷ್ಟಿದೆ. ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವುದಿಲ್ಲ. ಅವುಗಳನ್ನು ಅತಿಕ್ರಮಣ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿರುವುದುಂಟು. ಅದರ ಕೆಳಗೆಲ್ಲ ಹೂಳು ತುಂಬಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅವುಗಳ ಮೇಲೆ ಕಟ್ಟಡಗಳಿರುವುದರಿಂದ ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ.

ಅತಿಕ್ರಮಣ ತರವು ಏಕಿಲ್ಲ?: ಇನ್ನು ರಾಜಕಾಲುವೆ ಅತಿಕ್ರಮಣ ತೆರವುಗೊಳಿಸಲು ಪಾಲಿಕೆ ಮುಂದಾಗುತ್ತಿಲ್ಲ. ಆವಾಗವಾಗ ತೆರವುಗೊಳಿಸುತ್ತೇವೆ ಎಂಬ ಹೇಳಿಕೆ ನೀಡಲಾಗುತ್ತಿದೆಯೇ ಹೊರತು ತೆರವುಗೊಳಿಸುತ್ತಿಲ್ಲ. ತೆರವುಗೊಳಿಸಲು ಮುಂದಾದರೆ ಒತ್ತಡಗಳು ಬರುತ್ತವೆ. ಒತ್ತಡಕ್ಕೊಳಗಾಗುವ ಪಾಲಿಕೆ ಅಧಿಕಾರಿ ವರ್ಗ ತೆರವುಗೊಳಿಸುವ ಯೋಜನೆಯನ್ನೇ ಕೈ ಬಿಡುತ್ತವೆ. ಹೀಗಾಗಿ ಮಳೆ ಬಂದರೆ ಸಾಕು ರಾಜಕಾಲುವೆ ಉಕ್ಕೇರುತ್ತವೆ. ಸುತ್ತಮುತ್ತಲಿನ ಪ್ರದೇಶಗಳಿಗೆ ನುಗ್ಗುತ್ತವೆ. ಅರ್ಧಕ್ಕರ್ಧ ಊರನ್ನು ಪ್ರವಾಹಕ್ಕೀಡು ಮಾಡುತ್ತಿವೆ.

ಚರಂಡಿ ನೀರೆಲ್ಲ ರಸ್ತೆ ಮೇಲೆ: ಇನ್ನು ಚರಂಡಿಗಳು ಇವೆ. ಆದರೆ, ಅವು ಇದ್ದು ಇಲ್ಲದಂತಿವೆ. ಇವುಗಳನ್ನು ಪಾಲಿಕೆ ಸ್ವಚ್ಛಗೊಳಿಸುವುದಿಲ್ಲ. ಮಾಡಿದರೂ ಕಾಟಾಚಾರಕ್ಕೆಂಬಂತೆ ಮಾಡಲಾಗುತ್ತದೆ. ಇದರಿಂದ ಮಳೆಯಾದರೆ ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿಯುತ್ತದೆ. ಚರಂಡಿಗಳ‌ ನಿರ್ವಹಣೆ ಸಹ ಸರಿಯಾಗಿ ಮಾಡಲ್ಲ. ಈ ಎಲ್ಲ ಕಾರಣಗಳಿಂದ ಚರಂಡಿ ನೀರೆಲ್ಲ ರಸ್ತೆ ಮೇಲೆ ನದಿಯಂತೆ ಹರಿಯುತ್ತದೆ.

ಅವೈಜ್ಞಾನಿಕ ಕಾಮಗಾರಿ: ಇನ್ನು ಮಹಾನಗರ ಪಾಲಿಕೆ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳಡಿ ನಡೆಯುವ ವಿವಿಧ ಕಾಮಗಾರಿಗಳು ಅವೈಜ್ಞಾನಿಕವಾಗಿಯೇ ನಡೆಯುತ್ತವೆ. ಜತೆಗೆ ಒಂದಕ್ಕೊಂದು ಇಲಾಖೆಗಳ‌ ನಡುವೆ ಸಮನ್ವಯತೆ‌ ಕೊರತೆಯಿಂದಾಗಿಯೂ ಪ್ರವಾಹ ಪರಿಸ್ಥಿತಿ ಎದುರಾಗಲು ಕಾರಣವಾಗುತ್ತಿದೆ. ಇಲಾಖೆಗಳ‌ ನಡುವೆ ಸಮನ್ವಯತೆಯಿಂದ ಕಾಮಗಾರಿಗಳನ್ನು ಕೈಗೊಂಡರೆ ಸಮಸ್ಯೆ ಕೊಂಚ ಬಗೆಹರಿಯಬಹುದು.

ಬೆಂಗಳೂರು ಆಗದಿರಲಿ: ಇದೀಗ ಬೆಂಗಳೂರಲ್ಲಿ ಅರ್ಧಗಂಟೆ ಮಳೆಯಾದರೆ ಸಾಕು ಇಡೀ ಬೆಂಗಳೂರು ತತ್ತರಿಸುತ್ತದೆ. ಇದೀಗ ಹುಬ್ಬಳ್ಳಿಯಲ್ಲೂ ಸಣ್ಣದಾಗಿ ಅದೇ ಪರಿಸ್ಥಿತಿ ಆಗಲು ಶುರುವಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು, ಆಡಳಿತ ವರ್ಗ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲಾಖೆಗಳ‌ ನಡುವೆ ಸಮನ್ವಯತೆಯೊಂದಿಗೆ ಕಾಮಗಾರಿ ಮಾಡಬೇಕು. ಕಾಮಗಾರಿಗಳನ್ನು ಮಾಡಿದರೆ ಆಯ್ತು ಎಂಬಂತೆ ಮಾಡದೇ ವೈಜ್ಞಾನಿಕವಾಗಿ ಮಾಡುವಂತಾಗಬೇಕು. ಇನ್ಮೇಲಾದರೂ ಜನಪ್ರತಿನಿಧಿಗಳ, ಆಡಳಿತ ವರ್ಗ ನಗರದಲ್ಲಿ ವೈಜ್ಞಾನಿಕತೆ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

ರಾಜಕಾಲುವೆ ಸ್ವಚ್ಛಗೊಳಿಸಬೇಕು. ಸಿಸಿ ರಸ್ತೆ, ಚರಂಡಿ ಸೇರಿದಂತೆ ಕಾಮಗಾರಿಗಳನ್ನು ವೈಜ್ಞಾನಿಕತೆಯಿಂದಲೇ ಮಾಡಬೇಕು. ಹುಬ್ಬಳ್ಳಿ ಸಮಗ್ರ ಅಭಿವೃದ್ಧಿಯ ಕುರಿತಂತೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಬೇಕು ಎಂದು ಹಿರಿಯ ನಾಗರಿಕ ರಮೇಶ ಪಾಟೀಲ ಹೇಳಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ