ಹುಬ್ಬಳ್ಳಿ: ದೈಹಿಕ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಹುಬ್ಬಳ್ಳಿ ಫಿಟ್ನೆಸ್ ಫೌಂಡೇಷನ್ ವತಿಯಿಂದ ಭಾನುವಾರ ನಗರದ ಗೋಕುಲ ರಸ್ತೆ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಏರ್ಪಡಿಸಿದ್ದ 11ನೇ ಆವೃತ್ತಿಯ ಹುಬ್ಬಳ್ಳಿ ಹಾಫ್ ಮ್ಯಾರಥಾನ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಕಮಲ್ ಗ್ರುಪ್ನ ಅನ್ಮೋಲ್ ಮೆಹತಾ, ದೇಶಪಾಂಡೆ ಫೌಂಡೇಷನ್ ಸಿಇಒ ಪಿ.ಎನ್. ನಾಯಕ, ಹುಬ್ಬಳ್ಳಿ ಫಿಟ್ನೆಸ್ ಫೌಂಡೇಷನ್ನ ಡಾ. ಎಸ್.ಪಿ. ಬಳಿಗಾರ, ಡಾ. ಜಿ.ಸಿ. ಪಾಟೀಲ, ಕೆಎಲ್‌ಇ ಐಟಿ ಪ್ರಾಚಾರ್ಯ ಮನು ಟಿ.ಎಂ, ಎವಿಎಂ ಗ್ರಾನೈಟ್ನ ಅಭಿಷೇಕ ಮಲಾನಿ ಸೇರಿದಂತೆ ಇತರರು ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.
ಬಳ್ಳಾರಿ, ಮೈಸೂರು, ಬೆಂಗಳೂರು, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲದೇ ಹೊರ ರಾಜ್ಯಗಳ ಜನರು ಸಹ ಭಾಗವಹಿಸಿದ್ದರು. ವಿದೇಶಿ ಪ್ರಜೆಗಳು ಸಹ ಕೆಲವರು ಪಾಲ್ಗೊಂಡರು. ಮಲೇಷಿಯಾ ವಿದ್ಯಾರ್ಥಿಗಳು, ಫ್ರೆಂಚ್ ಪ್ರಜೆ ಸಾಂಚಿಸ್ ಡಿ. ಅವರ ಹಾಜರಿ ವಿಶೇಷವಾಗಿತ್ತು. 21 ಕಿ.ಮೀ ಓಟದಲ್ಲಿ ಸಾಂಚಿಸ್ 2ನೇ ಸ್ಥಾನ ಪಡೆದರು.5 ಕಿ.ಮೀ, 10 ಕಿ.ಮೀ, 21 ಕಿ.ಮೀ. (ಅರ್ಧ ಮ್ಯಾರಥಾನ್) ಓಟದಲ್ಲಿ ವಿವಿಧ ವಯೋಮಾನದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.