ಗದಗ:ಹುಬ್ಬಳ್ಳಿಯಲ್ಲಿ ಬಾಲಕಿ ಅತ್ಯಾಚಾರ ಹಾಗೂ ಕೊಲೆಯನ್ನು ಬಿಹಾರದವನು ಬಿಟ್ಟು ಯಾವನೋ ಕರಿಮನೋ, ರಹಿಮನೋ ಮಾಡಿದ್ದರೆ ಶೂಟೌಟ್ ಆಗುತ್ತಿರಲ್ಲ. ಇದೊಂದು ಸರ್ಕಾರಿ ಪ್ರಾಯೋಜಿಕ ಶೂಟೌಟ್ ಎಂದು ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರದವನಿಗೆ ಹಿಂದೆ ಮುಂದೆ ಯಾರೂ ದಿಕ್ಕಿರಲಿಲ್ಲ. ಈ ಪ್ರಕರಣದಿಂದ ಸರ್ಕಾರದ ಹೆಸರು ಕೆಡುತ್ತಿತ್ತು. ಅದಕ್ಕೆ ಸರ್ಕಾರ ಎಚ್ಚೆತ್ತುಕೊಂಡಿದೆ ಎಂದು ತೋರಿಸಬೇಕಿತ್ತು ಎಂದರು.ಈ ಹಿಂದೆ ಇಂತಹ ಸಾಕಷ್ಟು ಪ್ರಕರಣಗಳು ಆದಾಗ ಏನೂ ಆಗಿಲ್ಲ. ಹಳೇ ಹುಬ್ಬಳ್ಳಿಯಲ್ಲಿ ಪೊಲೀಸ್ ಜೀಪ್‌ಗೆ ಬೆಂಕಿ ಹಚ್ಚಿ, ಜೀಪ್ ಮೇಲೆ ಹತ್ತಿ ಕುಣಿದಾಡಿದರು. ಕಾಂಗ್ರೆಸ್ ಸರ್ಕಾರ ಅಂತವರ ಪ್ರಕರಣ ವಾಪಸ್ ತೆಗೆದುಕೊಂಡಿತು. ಇಂತವರ ಕೈಯಲ್ಲಿ ಸಂವಿಧಾನ ಪುಸ್ತಕ. ನಾನು ನಾಲ್ಕು ಬಾರಿ ಶಾಸಕ ಆಗಿದ್ದೀನಿ, ಇಂತಹ ಸರ್ಕಾರ ಎಂದೂ ನೋಡಿಲ್ಲ ಎಂದು ಕಿಡಿಕಾರಿದರು.ಈ ಸರ್ಕಾರದಲ್ಲಿ ಯಾವ ಗಂಡಸರ ಬಳಿ ಪಿಸ್ತೂಲ್ ಇರಲಿಲ್ಲವಾ? ಎಲ್ಲೋ ಕರಕೊಂಡು ಹೋಗಿ ಆ ಆರೋಪಿಗೆ ಒಬ್ಬ ಹೆಣ್ಣುಮಗಳ ಕಡೆ ಫೈರ್ ಮಾಡಿಸಿದ್ದಾರೆ. ಪೊಲೀಸರು ತಮ್ಮ ಪಿಸ್ತೂಲ್‌ಗಳನ್ನು ಆಯುಧ ಪೂಜೆ ದಿನ ಪೂಜೆ ಮಾಡಲಿಕ್ಕೆ ಇಟ್ಟಿದ್ದರಾ? ಎಂದು ಪ್ರಶ್ನಿಸಿದರು.
ಕಾನೂನಾತ್ಮಕವಾಗಿ ಏನೇ ಆಗಲಿ. ಆದರೆ ಇಂತಹ ಕೃತ್ಯ ಎಸಗುವರಿಗೆ ಭಯ ಹುಟ್ಟುವಂತೆ ಮಾಡಿರೋ ಪಿಎಸ್ಐ ಅನ್ನಪೂರ್ಣಗೆ ಸೆಲ್ಯೂಟ್ ಹೇಳುವೆ ಎಂದು ಶ್ಲಾಘಿಸಿದರು.ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಒಂದು ವರ್ಷವಾಗಿದೆ. ಸ್ಪೇಶಲ್ ಕೋರ್ಟ್ ಸ್ಥಾಪಿಸಿ ಆರೋಪಿಗೆ ಶಿಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾತು ಎತ್ತಿದರೆ ಸಂವಿಧಾನ ಸಂವಿಧಾನ ಎಂದು ಹೇಳುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ 18,000 ರೌಡಿಶೀಟರ್ ಕೇಸ್ ವಾಪಸ್ ತೆಗೆದುಕೊಂಡಿದ್ದಾರೆ. ಇನ್ನು ಇವರಿಗೆ ಹುಬ್ಬಳ್ಳಿ ಘಟನೆ ಯಾವ ಲೆಕ್ಕ? ಕಾಂಗ್ರೆಸ್‌ನವರ ಕಣ್ಣಿಗೆ ಅದು ದೊಡ್ಡದಲ್ಲ, ತುಷ್ಟೀಕರಣ ರಾಜಕಾರಣವೇ ಕಾಂಗ್ರೆಸ್ ಎಂದರು.ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಇತರರು ಇದ್ದರು.