ಅಮಿತ್‌ ಶಾ ಹೇಳಿಕೆ ಖಂಡಿಸಿ ಜ. 9ಕ್ಕೆ ಹುಬ್ಬಳ್ಳಿ-ಧಾರವಾಡ ಬಂದ್‌ ಕರೆ

KannadaprabhaNewsNetwork |  
Published : Jan 07, 2025, 12:31 AM IST
544 | Kannada Prabha

ಸಾರಾಂಶ

ಪ್ರತಿಭಟನಾ ಮೆರವಣಿಗೆ ಮೂಲಕ ತಮ್ಮ ವ್ಯಾಪ್ತಿಯ ಬಂದ್‌ನೊಂದಿಗೆ ಹುಬ್ಬಳ್ಳಿಯ ಅಂಬೇಡ್ಕರ್‌ ವೃತ್ತ, ಚೆನ್ನಮ್ಮ ವೃತ್ತ ಹಾಗೂ ಧಾರವಾಡದ ಜ್ಯುಬಲಿ ವೃತ್ತದಲ್ಲಿ ವಿಶೇಷ ಹಾಗೂ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ:

ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಕೇಂದ್ರ ಸಚಿವ ಅಮಿತ್‌ ಶಾ ಅವಮಾನ ಮಾಡಿದ್ದಾರೆಂದು ಆರೋಪಿಸಿರುವ ವಿವಿಧ ದಲಿತಪರ ಸಂಘಟನೆಗಳು, ಜ. 9ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಬಂದ್‌ಗೆ ಕರೆ ನೀಡಿವೆ. ಈ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗದ ಸಂಚಾಲಕ, ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ, ಅಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ತುರ್ತು ಸೇವೆ ಹೊರತುಪಡಿಸಿ ಎಲ್ಲ ಚಟುವಟಿಕೆ ಬಂದ್‌ ಮಾಡಲಾಗುವುದು. ಮಹಾನಗರದ ಶಾಲಾ-ಕಾಲೇಜು, ಅಂಗಡಿ-ಮುಂಗಟ್ಟು ಸ್ಥಗಿತಗೊಳಿಸಲಾಗುವುದು. ಶಾಲೆ-ಕಾಲೇಜ್‌ಗಳಿಗೆ ರಜೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

100 ಸಂಘ-ಸಂಸ್ಥೆ ಬೆಂಬಲ:

ಅಂದು ನಡೆಯುವ ಬಂದ್‌ ಬೆಂಬಲಿಸಿ ನಮಗೆ 100ಕ್ಕೂ ಅಧಿಕ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ. ಶಾಂತಿ, ಸದ್ಭಾವನೆಯೊಂದಿಗೆ ಮಹಾನಗರದ ಎಲ್ಲ ಬಡಾವಣೆಗಳಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಮ್ಮ ವ್ಯಾಪ್ತಿಯ ಬಂದ್‌ನೊಂದಿಗೆ ಹುಬ್ಬಳ್ಳಿಯ ಅಂಬೇಡ್ಕರ್‌ ವೃತ್ತ, ಚೆನ್ನಮ್ಮ ವೃತ್ತ ಹಾಗೂ ಧಾರವಾಡದ ಜ್ಯುಬಲಿ ವೃತ್ತದಲ್ಲಿ ವಿಶೇಷ ಹಾಗೂ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಬಂದ್‌ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಸೇವೆ ಹೊರತುಪಡಿಸಿ ಉಳಿದ ಯಾವುದೇ ವಾಹನ ಸಂಚಾರ, ವಾಣಿಜ್ಯ ವ್ಯವಹಾರ, ಹೊಟೇಲ್‌, ಸಿನಿಮಾ, ಆಟೋ, ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ವಾಹನ ಸಹಿತ ಸಕಲ ಚಟುವಟಿಕೆ ಬಂದ್‌ ಮಾಡುವ ಮೂಲಕ ಬೆಂಬಲಿಸುವಂತೆ ಮನವಿ ಮಾಡಿದರು.

ಶಾಸಕ ಪ್ರಸಾದ ಅಬ್ಬಯ್ಯ ಕೂಡ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶಂಕರ ಅಜಮನಿ, ಎಂ. ಅರವಿಂದ, ನಾಗೇಶ ಕತ್ರಿಮಲ್ಲಿ, ಪ್ರಭು ಪ್ರಭಾಕರ, ಮಾರುತಿ ದೊಡ್ಡಮನಿ, ಶ್ರೀನಿವಾಸ ಬೆಳದಡಿ ಸೇರಿದಂತೆ ಹಲವರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ