ಹುಬ್ಬಳ್ಳಿ: ಮತ್ತೆ ಸದ್ದು ಮಾಡಿದ ಪೊಲೀಸರ ಗನ್‌

KannadaprabhaNewsNetwork | Published : Aug 20, 2024 12:56 AM

ಸಾರಾಂಶ

ಹಳೇ ಹುಬ್ಬಳ್ಳಿಯ ಸದರ್‌ಸೋಫಾ ಬ್ಯಾಹಟ್ಟಿ ಪಾರ್ಕ್‌ನಲ್ಲಿ ಭಾನುವಾರ ತಡರಾತ್ರಿ ಅಫ್ತಾಬ್‌ ಕರಡಿಗುಡ್ಡ ಹಾಗೂ ಜಾವೂರ ಬೇಪಾರಿ ಎಂಬುವವರ ಗ್ಯಾಂಗ್‌ ನಡುವೆ ವಾರ್‌ ಆಗಿತ್ತು. ಮಾರಕಾಸ್ತ್ರಗಳಿಂದ ಎರಡು ಕಡೆಯವರು ಹೊಡೆದಾಡಿದ್ದರು. ಇದರಲ್ಲಿ ಜಾವೂರ ಬೇಪಾರಿಗೆ ಗಾಯಗಳಾಗಿದ್ದವು.

ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಗನ್‌ ಸದ್ದು ಮಾಡಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್‌ ಮೇಲೆ ಪೊಲೀಸರು ಫೈರಿಂಗ್‌ ಮಾಡಿದ ಘಟನೆ ಇಲ್ಲಿನ ಬುಡರಸಿಂಗಿ ವೃತ್ತದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಫೈರಿಂಗ್‌ನಿಂದಾಗಿ ರೌಡಿಶೀಟರ್‌ ಗಾಯಗೊಂಡಿದ್ದರೆ, ಆತನ ಹಲ್ಲೆಯಿಂದ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಕಳೆದ ಮೂರು ವಾರದಲ್ಲಿ ಪೊಲೀಸರು ನಡೆಸಿದ 3ನೇ ಫೈರಿಂಗ್‌ ಇದಾಗಿದೆ.

ಆಗಿದ್ದೇನು?

ರೌಡಿಶೀಟರ್‌ ಅಫ್ತಾಬ್‌ ಕರಡಿಗುಡ್ಡ ಪೊಲೀಸರ ಗುಂಡೇಟು ತಿಂದು ಗಾಯಗೊಂಡಿರುವಾತ. ಈತನ ಕಾಲಿಗೆ ಗುಂಡು ತಗುಲಿದ್ದು, ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ. ಹಳೇ ಹುಬ್ಬಳ್ಳಿಯ ಸದರ್‌ಸೋಫಾ ಬ್ಯಾಹಟ್ಟಿ ಪಾರ್ಕ್‌ನಲ್ಲಿ ಭಾನುವಾರ ತಡರಾತ್ರಿ ಅಫ್ತಾಬ್‌ ಕರಡಿಗುಡ್ಡ ಹಾಗೂ ಜಾವೂರ ಬೇಪಾರಿ ಎಂಬುವವರ ಗ್ಯಾಂಗ್‌ ನಡುವೆ ವಾರ್‌ ಆಗಿತ್ತು. ಮಾರಕಾಸ್ತ್ರಗಳಿಂದ ಎರಡು ಕಡೆಯವರು ಹೊಡೆದಾಡಿದ್ದರು. ಇದರಲ್ಲಿ ಜಾವೂರ ಬೇಪಾರಿಗೆ ಗಾಯಗಳಾಗಿದ್ದವು. ಈತನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಜನರನ್ನು ಪೊಲೀಸರು ಭಾನುವಾರ ರಾತ್ರಿಯೇ ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ ಅಫ್ತಾಬ್‌ ಕರಡಿಗುಡ್ಡ ಮಾತ್ರ ಸಿಕ್ಕಿರಲಿಲ್ಲ. ಖಚಿತ ಮಾಹಿತಿ ಮೇರೆಗೆ ಸೋಮವಾರ ಬೆಳಗ್ಗೆ 10.15ಕ್ಕೆ ಬುಡರಸಿಂಗಿ ವೃತ್ತದ ಬಳಿ ತೆರಳಿದ್ದರು. ಅಫ್ತಾಬ್‌ ಇರುವುದು ಗೊತ್ತಾಗಿ ಆತನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಆತ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದ್ದಾನೆ. ಈತನ ಹಲ್ಲೆಯಿಂದ ಪೊಲೀಸ್‌ ಪೇದೆಗಳಾದ ರಾಜು ರಾಥೋಡ, ಎಚ್‌.ಆರ್‌. ರಾಮಾಪುರ, ಎನ್‌. ಪಾಲಯ್ಯ ಗಾಯಗೊಂಡಿದ್ದಾರೆ. ಆಗ ಪಿಎಸ್‌ಐ ವಿಶ್ವನಾಥ ಆಲಮಟ್ಟಿ ಅವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಅಫ್ತಾಬ್‌ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಆದರೂ ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದ್ದಾನೆ. ಇದರಿಂದ ಕುಸಿದು ಬಿದ್ದಿದ್ದ ಆತನನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ.

ಗುಂಡೇಟು ತಿಂದಿರುವ ಅಫ್ತಾಬ್‌ ಹಾಗೂ ಆತನ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್‌ ಸಿಬ್ಬಂದಿಗಳನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.

ಹಿಂದಿನ ವೈಷಮ್ಯವೇ ಕಾರಣ:

ಘಟನೆಯ ನಡೆದ ಬಳಿಕ ಕಿಮ್ಸ್‌ಗೆ ಭೇಟಿಯಾಗಿ ಆರೋಪಿ ಹಾಗೂ ಪೊಲೀಸ್‌ ಸಿಬ್ಬಂದಿಗಳನ್ನು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ವೈಷಮ್ಯ ಹಿನ್ನೆಲೆಯಲ್ಲಿ ಈ ಗ್ಯಾಂಗ್‌ ವಾರ್‌ ನಡೆದಿತ್ತು. 2022ರಲ್ಲಿ ಜಾವೂರ ಜತೆಗಿದ್ದ ಜಾಫರ್ ಎಂಬಾತ ಅಫ್ತಾಬ್ ಸಹೋದರನನ್ನು ಕೊಲೆ ಮಾಡಿದ್ದ. ಇದೇ ಆಧಾರದಲ್ಲಿ 2024ರ ಮಾರ್ಚ್‌ನಲ್ಲಿ ಜಾವೂರನನ್ನು ರಾಯಚೂರು ನೇತಾಜಿ ಠಾಣೆ ವ್ಯಾಪ್ತಿಗೆ ಗಡೀಪಾರು ಮಾಡಲಾಗಿತ್ತು. ಭಾನುವಾರ ರಾತ್ರಿ ಹುಬ್ಬಳ್ಳಿಗೆ ಬಂದಿದ್ದ ಜಾವೂರ, ತನ್ನ ಸಹಚರರೊಂದಿಗೆ ಗ್ಯಾಂಗ್ ವಾರ್ ನಡೆಸಿದ್ದಾನೆ. ಈತ ಗಡೀಪಾರು ಬ್ರೇಕ್ ಮಾಡಿ ಏಕೆ ಈ ಭಾಗಕ್ಕೆ ಬಂದಿದ್ದ ಎಂಬುದರ ಕುರಿತು ತನಿಖೆ ಮಾಡಲಾಗುವುದು ಎಂದರು.

ಈ ವೇಳೆ ಡಿಸಿಪಿ ಮಹಾನಿಂಗ ನಂದಗಾವಿ, ಕಸಬಾಪೇಟೆ ಪಿಐ ರಾಘವೇಂದ್ರ ಹಳ್ಳೂರ ಸೇರಿದಂತೆ ಪೊಲೀಸ್‌ ಸಿಬ್ಬಂದಿಗಳಿದ್ದರು.

ತಿಂಗಳಲ್ಲೇ 3ನೆಯ ಫೈರಿಂಗ್‌ ಆಗಿರುವುದು ನಟೋರಿಯಸ್‌ಗಳಲ್ಲಿ ನಡುಕು ಹುಟ್ಟಿಸುವ ಕೆಲಸ ಪೊಲೀಸ್‌ ಕಮಿಷನರೇಟ್‌ ಮಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ರೀತಿ ಎಲ್ಲ ಬಗೆಯ ಅಕ್ರಮಗಳಿಗೆ ಕಮಿಷನರೇಟ್‌ ಕಡಿವಾಣ ಹಾಕಲಿ ಎಂಬುದು ಪ್ರಜ್ಞಾವಂತರ ಅಂಬೋಣ.

Share this article