ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಐಷಾರಾಮಿ ಪಲ್ಲಕ್ಕಿ ಬಸ್‌ಗಳ ಸೇವೆಯನ್ನು ವಿದ್ಯುಕ್ತವಾಗಿ ಆರಂಭಿಸಲಾಗಿದ್ದು, ಮೊದಲ ಎರಡು ಬಸ್‌ಗಳು ಹುಬ್ಬಳ್ಳಿ- ಶಿರಡಿ ನಡುವೆ ಸಂಚರಿಸುತ್ತವೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಹುಬ್ಬಳ್ಳಿಯಿಂದ ಶಿರಡಿಗೆ ಹೋಗುವ ಬಸ್ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಡುತ್ತದೆ. ಧಾರವಾಡ ಹೊಸ ಬಸ್ ನಿಲ್ದಾಣದಿಂದ 9ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 10.15ಕ್ಕೆ ಹೊರಡುತ್ತದೆ. ಪುಣೆ, ಅಹ್ಮದನಗರ ಮಾರ್ಗವಾಗಿ ಮರುದಿನ ಬೆಳಗ್ಗೆ 8.45 ಗಂಟೆಗೆ ಶಿರಡಿಗೆ ತಲುಪುತ್ತದೆ.
ಇನ್ನೊಂದು ಬಸ್ ಶಿರಡಿಯಿಂದ ರಾತ್ರಿ 8 ಗಂಟೆಗೆ ಹೊರಟು ಬೆಳಗಾವಿಗೆ ಬೆಳಗ್ಗೆ 5-15ಕ್ಕೆ, ಧಾರವಾಡಕ್ಕೆ 6-15ಕ್ಕೆ ಹಾಗೂ ಹುಬ್ಬಳ್ಳಿಗೆ 7-15ಕ್ಕೆ ಆಗಮಿಸುತ್ತದೆ. ಮೂಲ ಪ್ರಯಾಣ ದರ, ಅಪಘಾತ ಪರಿಹಾರ ನಿಧಿ ಶುಲ್ಕ ಹಾಗೂ ಟೋಲ್ ಫೀ ಸೇರಿ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಶಿರಡಿಗೆ ₹1,280 ಧಾರವಾಡದಿಂದ ಶಿರಡಿಗೆ ₹1,230 ಹಾಗೂ ಬೆಳಗಾವಿಯಿಂದ ಶಿರಡಿಗೆ ₹1,080 ನಿಗದಿಪಡಿಸಲಾಗಿದೆ.ಮುಂಗಡ ಬುಕ್ಕಿಂಗ್; ರಿಯಾಯಿತಿ www.ksrtc.in ಅಥವಾ KSRTC Mobile App ಪ್ರಮುಖ ಬಸ್ ನಿಲ್ದಾಣಗಳಲ್ಲಿರುವ ಬುಕ್ಕಿಂಗ್ ಕೌಂಟರ್ ಹಾಗೂ ಫ್ರಾಂಚೈಸಿ ಕೌಂಟರ್‌ಗಳಲ್ಲಿ ಮುಂಗಡ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್ ನಲ್ಲಿ ನಾಲ್ಕು ಅಥವಾ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.