ಬಿಡುಗಡೆಯಾಗದ ದನದ ದೊಡ್ಡಿ ಹಣ, ಫಲಾನುಭವಿಗಳ ಪರದಾಟ

KannadaprabhaNewsNetwork | Published : May 23, 2025 11:57 PM
ಲಕ್ಷ್ಮೇಶ್ವರ ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ರೈತರು ಸುಮಾರು 300ಕ್ಕೂ ಹೆಚ್ಚು ದನದ ದೊಡ್ಡಿ ನಿರ್ಮಾಣ ಮಾಡಿ ಸರ್ಕಾರದ ಅನುದಾನ ಬಿಡುಗಡೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
Follow Us

ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ:ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ರೈತರು ಸುಮಾರು 300ಕ್ಕೂ ಹೆಚ್ಚು ದನದ ದೊಡ್ಡಿ ನಿರ್ಮಾಣ ಮಾಡಿ ಸರ್ಕಾರದ ಅನುದಾನ ಬಿಡುಗಡೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸರ್ಕಾರ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಬಡ ರೈತರಿಗೆ ದನದ ದೊಡ್ಡಿ ಹಾಗೂ ಇಂಗು ಗುಂಡಿ ನಿರ್ಮಾಣ ಮಾಡಲು ಸಹಾಯ ಧನ ನೀಡುತ್ತದೆ. ಒಂದು ದನದ ದೊಡ್ಡಿ ನಿರ್ಮಾಣಕ್ಕೆ ಒಬ್ಬ ಫಲಾನುಭವಿಗೆ 57 ಸಾವಿರ ರು.ಗಳ ಸಹಾಯಧನ ನೀಡುವ ಮೂಲಕ ರೈತರಿಗೆ ನೆರವಾಗುತ್ತಿತ್ತು. ಇದರಿಂದ ಬಡ ರೈತರ ಜಾನುವಾರುಗಳ ಮಳೆ, ಚಳಿ ಹಾಗೂ ಬಿಸಿಲಿನಲ್ಲಿ ತೊಂದರೆ ಅನುಭವಿಸುತ್ತಿರಲಿಲ್ಲ.

ರೈತರಿಗೆ ಅನುಕೂಲವಾಗಿರುವ ಇಂತಹ ಯೋಜನೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತಿರುವ ಘಟನೆ ಕಂಡು ಬಂದಿವೆ.

ಲಕ್ಷ್ಮೇಶ್ವರ ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಪಂಗಳಲ್ಲಿ ದನದ ದೊಡ್ಡಿ ನಿರ್ಮಾಣ ಮಾಡಿ ಸರ್ಕಾರದ ಅನುದಾನಕ್ಕಾಗಿ ಅಡರಕಟ್ಟಿ-9, ಆದರಳ್ಳಿ-40, ಬಟ್ಟೂರ-8, ಬಾಲೆಹೊಸೂರ- 70, ಸೂರಣಗಿ-55, ದೊಡ್ಡೂರ-54, ಹುಲ್ಲೂರ-52, ಗೋವನಾಳ-8, ಮಾಡಳ್ಳಿ-11, ಯಳವತ್ತಿ-10, ಗೊಜನೂರ-7, ರಾಮಗೇರಿ-3, ಪು.ಬಡ್ನಿ-0, ಹಾಗೂ ಶಿಗ್ಲಿ-5 ಫಲಾನುಭವಿಗಳು ಕಾಯುತ್ತಿದ್ದಾರೆ.

ಕಳೆದ 2023-24ಕ್ಕೂ ಮೊದಲು ಸರ್ಕಾರ ವೆಂಡರ್‌ಗಳ ಮೂಲಕ ದನದ ದೊಡ್ಡಿ ನಿರ್ಮಾಣ ಮಾಡಿದ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುತ್ತಿತ್ತು. ಹೀಗೆ ದನದ ದೊಡ್ಡಿ ನಿರ್ಮಾಣ ಮಾಡಿದ ಫಲಾನುಭವಿಗಳಿಗೆ ಹಣ ನೀಡುವಾಗ ವೆಂಡರ್‌ಗಳು ವಿನಾಕಾರಣ ಕಿರುಕುಳ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದರು.

ಈ ಮಾಹಿತಿ ಅರಿತ ಸರ್ಕಾರ ವೆಂಡರ್‌ಗಳ ಹಣ ವರ್ಗಾವಣೆ ಆದೇಶ ತಡೆ ಹಿಡಿದು ನೇರವಾಗಿ ಫಲಾನುಭವಿ ಖಾತೆಗೆ ಹಣ ನೀಡುವ ಆದೇಶ ಜಾರಿ ಮಾಡಿದೆ. ಇದರಿಂದ 2023-24ರಲ್ಲಿ ದನದ ದೊಡ್ಡಿ ನಿರ್ಮಾಣ ಮಾಡಿ ಸರ್ಕಾರದ ಸಹಾಯ ಧನ ಮಾತ್ರ ಕೈಸೇರಿಲ್ಲ. 2 ವರ್ಷಗಳ ಹಿಂದೆ ದೊಡ್ಡೂರ ಗ್ರಾಪಂ ವ್ಯಾಪ್ತಿಯ ಯಲ್ಲಾಪುರ ಗ್ರಾಮದಲ್ಲಿ 57 ಸಾವಿರ ರು.ಗಳ ವೆಚ್ಚದಲ್ಲಿ ದನದ ದೊಡ್ಡಿ ನಿರ್ಮಾಣ ಮಾಡಿದ್ದೇನೆ. ದನದ ದೊಡ್ಡಿ ನಿರ್ಮಾಣ ಮಾಡಿದ ತಕ್ಷಣ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಪಿಡಿಓ ಅವರು ಹೇಳಿದ್ದರು. ಗ್ರಾಪಂ ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದ್ದು ಹಣ ಬಿಡುಗಡೆ ಮಾತ್ರ ಆಗುತ್ತಿಲ್ಲ. ಆದರೆ ಈಗ ಹಣ ಬಿಡುಗಡೆ ಮಾಡುವಲ್ಲಿ ವಿಳಂಭವಾಗಿರುವುದಕ್ಕೆ ನೂರಾರು ಕಾರಣ ಹೇಳುತ್ತಿದ್ದಾರೆ ದೊಡ್ಡೂರ ತಾಂಡಾದ ನಿಂಗಪ್ಪ ಶಿವಪ್ಪ ಅಕ್ಕೂರ, ಹನಮಂತಪ್ಪ ಕಾಶಪ್ಪ ಲಮಾಣಿ ಹೇಳಿದರು.

ಸರ್ಕಾರ ಕಳೆದ 2023-24ನೇ ಸಾಲಿನಲ್ಲಿ ವೆಂಡರ್‌ಗಳ ಮೂಲಕ ಹಣ ದನದ ದೊಡ್ಡಿ ನಿರ್ಮಾಣ ಮಾಡಿ ರೈತರಿಗೆ ಸಂದಾಯವಾಗುತ್ತಿತ್ತು. ಇದರಲ್ಲಿ ಆಗುತ್ತಿರುವ ಲೋಪ ಸರಿಪಡಿಸುವ ಕಾರಣದಿಂದ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಆದೇಶ ಮಾಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಆಗಿರುವ ಆದೇಶ ಇದರಲ್ಲಿ ನಮ್ಮದೇನು ಹಸ್ತಕ್ಷೇಪ ಇಲ್ಲ ಗ್ರಾಮ ಪಂಚಾಯಿತಿ ಪಿಡಿಒ ಶಿವಕುಮಾರ ವಾಲಿ ಹೇಳಿದರು.