ರಾಮನಗರ: ಬಿಡದಿ ಟೌನ್ ಯೋಜನೆ ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ ಎಸ್) ಪಕ್ಷದ ಕಾರ್ಯಕರ್ತರು ಕೆಂಗೇರಿಯಿಂದ ಬಿಡದಿ - ಬೈರಮಂಗಲದವರೆಗೆ ಬೃಹತ್ ಬೈಕ್ ಜಾಥಾ ನಡೆಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಆ ವೃತ್ತದಲ್ಲಿ ಧರಣಿ ನಿರತ ರೈತರು ಜಾಥಾಕ್ಕೆ ಸೇರ್ಪಡೆಯಾದರು. ನಂತರ ಜಾಥಾವು ಬೈರಮಂಗಲ, ಕೆಮ್ಮಶೆಟ್ಟಿದೊಡ್ಡಿ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಹೊಸೂರು, ಬನ್ನಿಗಿರಿ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಸಂಚರಿಸಿತು.
ಬೈಕ್ ಜಾಥಾದ ಮಧ್ಯದಲ್ಲಿ ರೈತರ ಜಮೀನಿಗೆ ಇಳಿದ ರವಿ ಕೃಷ್ಣಾರೆಡ್ಡಿ ಅವರು, ನೇಗಿಲನ್ನು ಹಿಡಿದು ಸಾಂಕೇತಿಕವಾಗಿ ಭೂಮಿ ಉಳುಮೆ ಮಾಡಿದರು. ಈ ಮೂಲಕ ಸರ್ಕಾರ ಸುಳ್ಳು ಹೇಳುತ್ತಿರುವಂತೆ ಇದು ಯಾವುದೇ ಕಾರಣಕ್ಕೂ ಬಂಜರು ಭೂಮಿಯಲ್ಲ, ಬದಲಾಗಿ ತೆಂಗು, ಅಡಿಕೆ, ರೇಷ್ಮೆಯಂತಹ ಬೆಳೆಗಳನ್ನು ಬೆಳೆಯುತ್ತಿರುವ ಅತ್ಯಂತ ಫಲವತ್ತಾದ ಕೃಷಿ ಭೂಮಿ ಎಂದು ರಾಜ್ಯದ ಜನತೆಗೆ ಹಾಗೂ ಸರ್ಕಾರಕ್ಕೆ ಸ್ಪಷ್ಟವಾದ ಸಂದೇಶ ರವಾನಿಸಿದರು.ಧರಣಿ ಸ್ಥಳದಲ್ಲಿ ಮಾತನಾಡಿದ ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುತ್ತೇನೆ ಎಂದು ಸರ್ಕಾರ ಸ್ಪಷ್ಟವಾಗಿ ಘೋಷಿಸುವವರೆಗೆ ಹೋರಾಟ ತೀವ್ರಗೊಳ್ಳಬೇಕು. ಅಗತ್ಯವಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವಂತಹ ಹೋರಾಟ ರೂಪಿಸಬೇಕು. ರಾಜ್ಯದ ಇತರ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಕನ್ನಡಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಿ ಬೈರಮಂಗಲ ರೈತರಿಗೆ ಬಲ ನೀಡಬೇಕು ಎಂದು ಮನವಿ ಮಾಡಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿ.ಎನ್. ದೀಪಕ್ ಮಾತನಾಡಿ, ಇಂದಿನ ಸರ್ಕಾರಗಳು ರೈತರ ಹಿತ ಕಾಯುವ ಬದಲು, ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳಲು ಸಂಚು ರೂಪಿಸುತ್ತಿವೆ. ಬಿಡದಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ರೈತರ ಜಮೀನಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ರೈತರು ತಮ್ಮ ತಾಯಿ ಸಮಾನವಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಅವರ ಈ ನ್ಯಾಯಯುತ ಹೋರಾಟಕ್ಕೆ ಕೆಆರ್‌ಎಸ್ ಪಕ್ಷ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಹೇಳಿದರು.
----------------------------
ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಬೃಹತ್ ಬೈಕ್ ಜಾಥಾ ನಡೆಸಿದರು.