ಬಸವರಾಜ ಸರೂರ ರಾಣಿಬೆನ್ನೂರು
ಪ್ರಸಕ್ತ ವರ್ಷದ ಕೃಷಿ ಚಟುವಟಿಕೆ ಆರಂಭವಾಗುವ ಮುನ್ನ ರೈತರು ತಮ್ಮ ಜಮೀನುಗಳ ಫಲವತ್ತತೆ ಹೆಚ್ಚಿಸಲು ಮುಂದಾಗಿದ್ದು, ಈಗ ಕೆರೆಗಳ ಮಣ್ಣಿಗೆ ಭಾರಿ ಡಿಮ್ಯಾಂಡ್ ಬಂದಿದೆ.ತಾಲೂಕಿನ ಅಲ್ಲಲ್ಲಿ ಕೆರೆಗಳ ಮಣ್ಣುಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಹಾಕಿಸಿಕೊಳ್ಳುವ ಕಾರ್ಯ ಭರದಿಂದ ನಡೆದಿದ್ದು, ಎಲ್ಲಿ ನೋಡಿದರಲ್ಲಿ ಜಮೀನುಗಳಲ್ಲಿ ಟ್ರ್ಯಾಕ್ಟರ್‌ಗಳಿಂದ ಮಣ್ಣು ಹೇರಿಸುವ ಹಾಗೂ ಅದನ್ನು ಜಮೀನು ತುಂಬಾ ಹರಡುವ ಕಾರ್ಯ ಭರದಿಂದ ನಡೆದಿದೆ.
ಕೆರೆಗಳಲ್ಲಿ ಹೊಳೆತ್ತುವ ಕೆಲಸ: ಬೇಸಿಗೆಯಾದ ಕಾರಣ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಹೊಳೆತ್ತುವ ಕಾರ್ಯ ನಡೆದಿದೆ. ಹೀಗಾಗಿ ಕೆರೆಗಳಲ್ಲಿ ಮಣ್ಣನ್ನು ರೈತರ ಜಮೀನುಗಳಿಗೆ ಹಾಕಲಾಗುತ್ತಿದೆ. ರೈತರ ಜಮೀನಿನ ದೂರದ ಆಧಾರದ ಮೇಲೆ ಮಣ್ಣಿನ ದರ ನಿಗದಿ ಮಾಡಲಾಗಿದ್ದು, ಫಲವತ್ತಾದ ಮಣ್ಣಿಗೆ ರೈತರಿಂದ ಬೇಡಿಕೆ ಹೆಚ್ಚಿದೆ.ಎಲ್ಲೆಲ್ಲಿ ಕೆಲಸ?: ತಾಲೂಕಿನ ಅಸುಂಡಿ, ಮೆಡ್ಲೇರಿ, ಚಳಗೇರಿ ಸೇರಿದಂತೆ ಪ್ರಮುಖ ಕೆರೆಗಳಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು, ಒಂದು ಟಿಪ್ಪರ್ ಗಾಡಿಗೆ ₹ 2800 ಹಣ ನೀಡಿ ಜಮೀನಿಗೆ ಹಾಕಿಸಲಾಗಿದೆ. ಅದನ್ನು ಟ್ರ್ಯಾಕ್ಟರ್‌ಗಳಿಂದ ಹರಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ರೈತ ನಿಂಗಪ್ಪ ತಿಳಿಸಿದ್ದಾರೆ.
ಮಣ್ಣಿನ ಫಲವತ್ತತೆ ಹೆಚ್ಚಳ:ಮುಂಗಾರು ಮಳೆ ಆರಂಭವಾಗುವ ಮುನ್ನ ಭೂಮಿ ಹದಗೊಳಿಸುತ್ತಿರುವ ರೈತರು ಫಲವತ್ತಾದ ಕೆರೆಯ ಮಣ್ಣನ್ನು ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಿಸುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ. ರೈತ ಸಮುದಾಯ ಸಗಣಿ ಗೊಬ್ಬರ ಪಡೆಯಲು ಸಾಕಷ್ಟು ಹಣ ವೆಚ್ಚ ಮಾಡಬೇಕಾಗಿದೆ. ಅದು ದುಡ್ಡು ಕೊಟ್ಟರೂ ಗುಣಮಟ್ಟದ ಗೊಬ್ಬರ ದೊರೆಯುವುದು ಕಷ್ಟವಾಗಿದೆ. ಹೀಗಾಗಿ ಭೂಮಿಯ ಫಲವತ್ತತೆ ಹೆಚ್ಚಿಸುವುದಕ್ಕಾಗಿ ಕೆರೆಯ ಮಣ್ಣಿಗೆ ಮಾರು ಹೋಗುತ್ತಿದ್ದು, ನಮ್ಮ ಹತ್ತಿರದಲ್ಲಿ ಅದು ಕಡಿಮೆ ದರದಲ್ಲಿ ದೊರೆಯುವ ಮಣ್ಣನ್ನು ಜಮೀನಿಗಳಿಗೆ ಹಾಕಿಸಲಾಗುತ್ತಿದೆ.ಕೆರೆ ಹೊಳೆತ್ತುವ ಕೆಲಸ ನಡೆಸಲಾಗುತ್ತಿದೆ ಎಂಬುದನ್ನು ತಿಳಿದು ಜಮೀನಿಗೆ ಕೆರೆ ಮಣ್ಣನ್ನು ಹಾಕಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರದಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಕೆರೆಯ ಮಣ್ಣಿನಲ್ಲಿ ಸಾಕಷ್ಟು ಫಲವತ್ತತೆಯಿದ್ದು, ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ತಾಲೂಕಿನ ರೈತ ವಿನಾಯಕ ಹೇಳಿದರು.
ರೈತರು ಜಮೀನುಗಳಿಗೆ ಕೆರೆ ಮಣ್ಣು ಹಾಕಿಸಿಕೊಳ್ಳುವುದರಿಂದ ಸಾಕಷ್ಟು ಉಪಯೋಗವಿದೆ. ಕೆರೆಯ ಮಣ್ಣಿನಲ್ಲಿ ಸಾಕಷ್ಟು ಪೋಷಕಾಂಶ ಇರುವುದರಿಂದ ಭೂಮಿಯ ಫಲವತ್ತನೆ ಹೆಚ್ಚಳವಾಗುವ ಜತೆಗೆ ಬೆಳೆಗಳಿಗೆ ತೇವಾಂಶ ಒದಗಿಸುತ್ತದೆ. ಹೀಗಾಗಿ ಕೆರೆಗಳ ಮಣ್ಣು ಹಾಕಿಸುವುದು ಒಳ್ಳೆಯದು ಎಂದು ಹಿರಿಯ ರಾಣಿಬೆನ್ನೂರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಂ. ಹಲಗೇರಿ ತಿಳಿಸಿದ್ದಾರೆ.