ಹೊಸಪೇಟೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 50 ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆಯಡಿ ಕರ್ನಾಟಕದ ಐತಿಹಾಸಿಕ ತಾಣಗಳಾದ ಹಂಪಿ, ಮೈಸೂರು, ಲಕ್ಕುಂಡಿ ಕ್ಷೇತ್ರಗಳನ್ನು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ತೀವ್ರ ಸಿದ್ಧತೆ ನಡೆಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಜಾಗತಿಕ ಪ್ರವಾಸಿ ತಾಣಗಳ ಪಟ್ಟಿಗೆ ಕರ್ನಾಟಕದಿಂದ ಮೂರು ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಪ್ರಸ್ತಾಪಿಸಲಾಗಿದೆ. ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣವಾಗಿರುವುದರಿಂದ ಹಂಪಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಇದನ್ನು ಭಾರತದ ಪ್ರವಾಸೋದ್ಯಮದ ಪ್ರಮುಖ ಹೆಗ್ಗುರುತನ್ನಾಗಿ ರೂಪಿಸಲಾಗುವುದು ಎಂದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕವು ಜಗತ್ತಿನಲ್ಲೇ ಅತ್ಯುತ್ತಮ ಸಾಮರ್ಥ್ಯ ಹೊಂದಿದೆ. ಕೆಎಸ್ಟಿಡಿಸಿ, ಜಂಗಲ್ ಲಾಡ್ಜಸ್ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿದ್ದರೂ ಖಾಸಗಿ ಹೂಡಿಕೆದಾರರ ಸಕ್ರಿಯ ಪಾಲ್ಗೊಳ್ಳುವಿಕೆಯಿಲ್ಲದೆ ಪ್ರವಾಸೋದ್ಯಮದ ಕ್ರಿಯಾತ್ಮಕ ಬದಲಾವಣೆ ಸಾಧ್ಯವಿಲ್ಲ. ಸರ್ಕಾರ ಮತ್ತು ಖಾಸಗಿ ಪಾಲುದಾರರು ಒಂದು ತಂಡವಾಗಿ ಕೆಲಸ ಮಾಡಿ ಕರ್ನಾಟಕದ ವರ್ಚಸ್ಸನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಬೇಕಿದೆ ಎಂದರು.ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಹಂಪಿಯ ಸುಮಾರು 1200ಕ್ಕೂ ಹೆಚ್ಚು ಸ್ಮಾರಕಗಳನ್ನು ಒಳಗೊಂಡಂತೆ ಪ್ರವಾಸಿಗರಿಗಾಗಿ ಸುಸಜ್ಜಿತ 15.4 ಕಿ.ಮೀ ಉದ್ದದ ಪ್ರದಕ್ಷಿಣಾ ಪಥ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹೆರಿಟೇಜ್ ವಾಕ್ ಮೂಲಕ ಪ್ರವಾಸಿಗರಿಗೆ ಹಂಪಿಯ ವೈಭವವನ್ನು ಹತ್ತಿರದಿಂದ ವೀಕ್ಷಿಸಲು ಅನುಕೂಲವಾಗಲಿದೆ. ಹಂಪಿ ಸ್ಮಾರಕಗಳ ದೀರ್ಘಾವಧಿ ರಕ್ಷಣೆಗಾಗಿ ಭಾರತೀಯ ಪುರಾತತ್ವ ಸಮೀಕ್ಷೆ ಸಹಯೋಗದೊಂದಿಗೆ ವೈಜ್ಞಾನಿಕ ದಸ್ತಾವೇಜೀಕರಣ ಮತ್ತು ಡಿಜಿಟಲ್ ಪ್ರಿಸರ್ವೇಶನ್ ಯೋಜನೆಗೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ ಎಂದರು.