ಕನ್ನಡಪ್ರಭ ವಾರ್ತೆ ಬೆಳಗಾವಿ
ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. 2ನೇ ಹಂತದ ಮತದಾನ ನಡೆಯುವ ಬೆಳಗಾವಿ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಅತ್ಯಂತ ಬಿರುಸಿನ ಪ್ರಚಾರ ನಡೆಸುತ್ತಿವೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ಪ್ರಚಾರಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ.ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಕ್ಷೇತ್ರ ಹೊಸದಲ್ಲ. 2014ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಆದರೆ, ಈ ಬಾರಿ ಮಗನನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಧನೆ, ಶಾಸಕಿ, ಸಚಿವೆಯಾಗಿ ಮಾಡಿದ ಸಾಧನೆಗಳು ಬೆನ್ನಿಗಿವೆ. ವಿಶೇಷವೆಂದರೆ ಸಚಿವರು ಪ್ರಚಾರಕ್ಕೆಂದು ಹೊದಲ್ಲೆಲ್ಲ ಜನರು ಸ್ವಯಂ ಪ್ರೇರಣೆಯಿಂದ ಬೆಂಬಲ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೆಲಸ ಮಾಡಿರುವುದು ಎಲ್ಲೆಡೆ ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ನಾವು ನಿಟ್ಟುಸಿರು ಬಿಡುವಂತಾಗಿದೆ. ಬೆಲೆ ಏರಿಕೆಯಿಂದ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಗೃಹ ಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಕಾಂಗ್ರೆಸ್ ಸರ್ಕಾರ ನಮ್ಮದೇ ಎನ್ನುವ ಭಾವನೆ ಮೂಡಿದೆ ಎಂದು ಜನರು ಹೇಳುತ್ತಿದ್ದಾರೆ ಎಂದು ಹೆಬ್ಬಾಳಕರ್ ಸ್ಮರಿಸಿದರು.
ಹಳ್ಳಿಗಳಲ್ಲಿ ಮಹಿಳೆಯರು, ವಿಶೇಷವಾಗಿ ವೃದ್ಧೆಯರು ಹತ್ತಿರ ಬಂದು ಸಚಿವರನ್ನು ಅಪ್ಪಿ, ತಲೆಯ ಮೇಲೆ ಕೈ ಇಟ್ಟು ಹರಸಿ, ಹಾರೈಸುವುದು ಸಾಮಾನ್ಯವಾಗಿತ್ತು. ಲಕ್ಷ್ಮೀ ಹೆಬ್ಬಾಳಕರ್ ಮೇಲಿನ ಮಮಕಾರ ಯಾವುದೇ ಊರಲ್ಲಿ ಹೋದರೂ ಕಾಣುತ್ತಿದೆ. ಪ್ರತಿ ಊರಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ, ಹೂವಿನ ಮಳೆಗರೆಯುವುದು, ಆರತಿ ಮಾಡಿ ಸ್ವಾಗತಿಸುವುದು ಉತ್ಸಾಹ ಇಮ್ಮಡಿಸಿದೆ ಎಂದವರು ತಿಳಿಸಿದ್ದಾರೆ.ಜನರ ಇಂತಹ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸುವುದು ಎಂದೇ ತಿಳಿಯುತ್ತಿಲ್ಲ. ಅವರ ಋಣ ತೀರಿಸುವುದು ಸಾಧ್ಯವೇ ಇಲ್ಲ. ಈ ಬಾರಿ ಮೃಣಾಲ ಹೆಬ್ಬಾಳಕರ್ ಆಯ್ಕೆಯಾಗುವುದು ಖಚಿತ. ಚುನಾವಣೆಯ ನಂತರ ಜನರು ನಿರೀಕ್ಷಿಸಿದ ರೀತಿಯಲ್ಲಿ ಅವರ ಸೇವೆ ಮಾಡಲಾಗುವುದು. ಹಿಂದಿನ ಯಾವುದೇ ಸಂಸದರು ಮಾಡದ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸಲಾಗುವುದು ಎಂದು ಸಚಿವೆ ಹೆಬ್ಬಾಳಕರ್ ಹೇಳುತ್ತಾರೆ.