ತುಮಕೂರಿನಲ್ಲಿ ಬೃಹತ್ ತಿರಂಗ ಯಾತ್ರೆ

KannadaprabhaNewsNetwork | Published : May 19, 2025 12:14 AM
Follow Us

ಸಾರಾಂಶ

ರಾಷ್ಟ್ರ ರಕ್ಷಣೆಗಾಗಿ ಹಾಗೂ ದೇಶದ ಜನ ತಮ್ಮ ಐಕ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ದೇಶದ ರಕ್ಷಣೆಗಾಗಿ ನಮ್ಮೆಲ್ಲರ ನಡೆ ಎಂಬ ಧ್ಯೇಯವಾಕ್ಯದೊಂದಿಗೆ ರಾಷ್ಟ್ರೀಯ ರಕ್ಷಣೆಗಾಗಿ ನಾಗರಿಕರು, ತುಮಕೂರು ವತಿಯಿಂದ ತಿರಂಗ ಯಾತ್ರೆಯನ್ನು ನಗರದಲ್ಲಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರು ರಾಷ್ಟ್ರ ರಕ್ಷಣೆಗಾಗಿ ಹಾಗೂ ದೇಶದ ಜನ ತಮ್ಮ ಐಕ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ದೇಶದ ರಕ್ಷಣೆಗಾಗಿ ನಮ್ಮೆಲ್ಲರ ನಡೆ ಎಂಬ ಧ್ಯೇಯವಾಕ್ಯದೊಂದಿಗೆ ರಾಷ್ಟ್ರೀಯ ರಕ್ಷಣೆಗಾಗಿ ನಾಗರಿಕರು, ತುಮಕೂರು ವತಿಯಿಂದ ತಿರಂಗ ಯಾತ್ರೆಯನ್ನು ನಗರದಲ್ಲಿ ನಡೆಸಲಾಯಿತು.ನಗರದ ಎಸ್‌ಐಟಿ ಕಾಲೇಜು ಮುಂಭಾಗದಿಂದ ಹೊರಟ ತಿರಂಗ ಯಾತ್ರೆಗೆ ವಿವಿಧ ಮಠಾಧೀಶರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ವಿ. ಸೋಮಣ್ಣ, ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ಅವರು ಚಾಲನೆ ನೀಡಿದರು. ನಂತರ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಾತನಾಡಿ, ಇದೊಂದು ದೇಶದ ಅಖಂಡತೆ ಮತ್ತು ಸಾರ್ವಭೌಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕೈಗನಡಿಯಲ್ಲಿ ದೇಶದ ಇತಿಹಾಸದ ಅನೇಕ ಘಟನಾವಳಿಗಳನ್ನು ಭಾರತೀಯರು ಓದಿ ಅರ್ಥ ಮಾಡಿಕೊಂಡಿದ್ದೇವೆ ಎಂದರು.ಪಹಲ್ಗಾಮ್‌ನಲ್ಲಿ ಅಮಾಯಕ 26 ಜನರನ್ನು ಹತ್ಯೆ ಮಾಡಿದ ಉಗ್ರರಿಗೆ ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವದಲ್ಲಿ ದೇಶದ ಯೋಧರು ಇಡೀ ವಿಶ್ವಕ್ಕೆ ಭಾರತದ ಸಾರ್ವಭೌಮತ್ವವನ್ನು ತೋರಿಸಿಕೊಟ್ಟಿದ್ದಾರೆ. ದೇಶದ ವ್ಯವಸ್ಥೆಯನ್ನು ಬುಡಮೇಲು ಮಾಡುವ ದುರಾಲೋಚನೆ ಇದ್ದವರಿಗೆ ಸೈನಿಕರು ತಕ್ಕಪಾಠ ಕಲಿಸಲಿದ್ದಾರೆ. ಉಗ್ರರು ಮಾಡಿರುವ ಪಾಪವನ್ನು ಮುಚ್ಚಿಕೊಳ್ಳುವ ಕೆಲಸವನ್ನು ಪಾಕಿಸ್ತಾನದವರು ಮಾಡಿದ್ದಾರೆ. ಹಾಗಾಗಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನೀಡಿರುವ ತಕ್ಕಉತ್ತರವನ್ನು ಇಡೀ ವಿಶ್ವವೇ ನೋಡಿದೆ ಎಂದರು.

ದುಷ್ಟರನ್ನು ಸದೆ ಬಡಿಯುವ ಕೆಲಸಕ್ಕೆ ನಾಂದಿ ಹಾಡುವ ಕೆಲಸವನ್ನು ನಮ್ಮ ಸೈನಿಕರು ಮಾಡಿದ್ದಾರೆ. ಇಂತಹ ಯೋಧರಿಗೆ ಕೋಟಿ ಕೋಟಿ ನಮನ ಎಂದರು.

ರಾಮಕೃಷ್ಣ ಆಶ್ರಮದ ವೀರೇಶಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಭಯೋತ್ಪಾದನೆ ವಿರುದ್ಧ ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ಜಗತ್ತಿನಲ್ಲೇ ಭಾರತ ಇಟ್ಟಿರುವ ಮೊದಲ ಹೆಜ್ಜೆ. ಪಹಲ್ಗಾಮ್‌ನಲ್ಲಿ ಮುಗ್ದ ಜನರಿಗೆ ಗುಂಡಿನಿಂದ ಹೊಡೆದು ಕೊಂದಿರುವ ಮನುಷ್ಯ ರೂಪದ ಮೃಗಗಳಿಗೆ ಪ್ರಧಾನಿಯವರು ದಿಟ್ಟ ನಿರ್ಧಾರ ಕೈಗೊಂಡು ತಕ್ಕ ಪಾಠ ಕಲಿಸಿದ್ದಾರೆ. ನಮ್ಮ ದೇಶದ ಸೈನ್ಯದ ಶಕ್ತಿಯನ್ನು ಕಂಡು ಇಡೀ ವಿಶ್ವವೇ ನಿಬ್ಬೆರಗಾಗಿದೆ ಎಂದು ಶ್ರೀಗಳು ತಿಳಿಸಿದರು.

ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತ ಅಘೋಷಿತ ಯುದ್ಧವನ್ನು ಗೆದ್ದಿದೆ. ಇದು ನಮ್ಮ ದೇಶದ ಯುದ್ಧವಲ್ಲ, ಭಯೋತ್ಪಾದರ ಕುಕೃತ್ಯಕ್ಕೆ ಪ್ರತೀಕಾರ ಅಷ್ಟೇ. 9 ಉಗ್ರನೆಲೆಗಳನ್ನು ನಮ್ಮ ಯೋಧರು ಧ್ವಂಸ ಮಾಡಿದ್ದಾರೆ. ನಮ್ಮ ಸೈನಿಕರ ಧೈರ್ಯ, ಶೌರ್ಯವನ್ನು ಎಲ್ಲರೂ ಮೆಚ್ಚಲೇಬೇಕು. ನಮ್ಮ ಯುದ್ಧ ಭಯೋತ್ಪಾದಕರ ವಿರುದ್ಧ, ಆತಂಕವಾದಿಗಳ ವಿರುದ್ದ. ಯಾವುದೇ ರಾಷ್ಟ್ರದ ವಿರುದ್ಧ ಅಲ್ಲ ಎಂಬುದನ್ನು ನಮ್ಮ ದೇಶ ಸಾಬೀತುಪಡಿಸಿದೆ ಎಂದರು.

ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಜಾತಿ, ಮತ, ಪಂಥ ಪಕ್ಕಕ್ಕಿಟ್ಟು ಭಾರತ ರಾಷ್ಟ್ರ, ತಾಯಿ ಎಂಬ ನಿರ್ಣಯ ಮಾಡಿಕೊಳ್ಳಬೇಕು. ನಮ್ಮ ಮಧ್ಯೆದಲ್ಲಿ ದೇಶದ್ರೋಹಿಗಳಿರುತ್ತಾರೆ. ರಾಮನಿದ್ದ ಜಾಗದಲ್ಲಿ ರಾವಣ ಇರಲೇಬೇಕು. ಅಂತಹವರ ಬಗ್ಗೆ ಎಚ್ಚರಿಕೆ ವಹಿಸಿ ಎದೆಕೊಟ್ಟು ನಿಂತು ದೇಶದೊಳಗೆ ಬುದ್ಧಿ ಕಲಿಸಬೇಕು ಎಂದರು. ಶಾಸಕ ಜ್ಯೋತಿಗಣೇಶ್ ಮಾತನಾಡಿ, ಭಾರತ ದೇಶದ ಭದ್ರತೆಗಾಗಿ ಪಾಕಿಸ್ತಾನವನ್ನು ಬಗ್ಗು ಬಡಿದ ದೇಶದ ಯೋಧರನ್ನು ಪ್ರೋತ್ಸಾಹಿಸುವುದಕ್ಕಾಗಿ ತಿರಂಗ ಯಾತ್ರೆಯನ್ನು ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ತುಮಕೂರು ವತಿಯಿಂದ ನಡೆಸಲಾಗುತ್ತಿದೆ ಎಂದರು.

ಎಸ್‌ಎಸ್‌ಐ ಕಾಲೇಜು ಮುಂಭಾಗದಿಂದ ಹೊರಟ ತಿರಂಗಯಾತ್ರೆಯು ಗಂಗೋತ್ರಿ ರಸ್ತೆ ಮೂಲಕ ಎಸ್‌ಎಸ್‌ಪುರಂ ನಮ್ಮ ಆಹಾರ ಮುಂಭಾಗದ ಮೂಲಕ ಸಾಗಿ ಭೈರವೈಶ್ವರ್ ಬ್ಯಾಂಕ್ ಮುಂಭಾದಲ್ಲಿ ಅಂತ್ಯಗೊಂಡಿತು.ಈ ತಿರಂಗ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವರಾದ ಸೊಗಡು ಶಿವಣ್ಣ, ಬಿ.ಸಿ. ನಾಗೇಶ್, ಶಾಸಕರಾದ ಮಸಾಲ ಜಯರಾಮ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಡಾ. ಪರಮೇಶ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಪ್ರದೀಪ್‌ಕುಮಾರ್, ಅಂಬಿಕಾ ಹುಲಿನಾಯ್ಕರ್, ದಿಲೀಪ್‌ಕುಮಾರ್, ಕ್ಯಾ. ರಾಮಲಿಂಗರೆಡ್ಡಿ, ಮಾಜಿ ಯೋಧ ನಾಗರಾಜು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಪಾದ್ರಿಗಳು, ಟಿಸಿಸಿಐನ ನಿರ್ದೇಶಕ ಜಿ. ಆರ್. ಸುರೇಶ್, ಚಂದ್ರಮೌಳಿ, ಸುರೇಶ್ ಆರ್.ಜೆ., ಪಿ. ರಾಮಯ್ಯ, ಶಿವಾಜಿ ಬ್ಯಾಂಕ್ ಸುರೇಶ್, ಡಾ. ಸುರೇಶ್‌ಬಾಬು, ಶಂಕರ್, ಶಿವನಂಜಪ್ಪ, ರಾಮಕೃಷ್ಣಪ್ಪ ಸೇರಿದಂತೆ ಪಕ್ಷಾತೀತವಾಗಿ ನಗರದ ನಾಗರಿಕರು ಪಾಲ್ಗೊಂಡಿದ್ದರು.