ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಕ್ಕೇರಿ ಗ್ರೇಡ್-2 ತಹಸೀಲ್ದಾರ್ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಕ್ಕೇರಿ ಗ್ರೇಡ್-2 ತಹಸೀಲ್ದಾರ್ ವಾಲ್ಮೀಕಿ ಸಮಾಜಕ್ಕೆ ಮಾಡಿರುವ ಅನ್ಯಾಯದ ಕುರಿತು ಅಧಿವೇಶನದ ವೇಳೆ ಸರ್ಕಾರದ ಗಮನಕ್ಕೆ ತರಲಾಗುವುದು. ಕೇವಲ ವಾಲ್ಮೀಕಿ ಸಮಾಜ ಮಾತ್ರವಲ್ಲ. ಹಿಂದುಳಿದ ಹಾಗೂ ಎಸ್ಸಿ, ಎಸ್ಟಿ ಸಮಾಜದ ನಕಲಿ ದಾಖಲೆ ಸೃಷ್ಟಿಯಿಂದ ಅಹಿಂದ ಜನಾಂಗಕ್ಕೆ ಅನ್ಯಾಯವಾಗುತ್ತಿದೆ. ನಾವು ಜನತಾ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದೇವೆ ಎಂದರು.ಹುಕ್ಕೇರಿ ಗ್ರೇಡ್-2 ತಹಸೀಲ್ದಾರ್ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯ ಸರ್ಕಾರ ಕೇವಲ ವಕೀಲರ ಮೂಲಕ ಕಾರಣ ಕೇಳಿ ನೋಟಿಸ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕರಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿಯಿಂದ ಅನ್ಯಾಯಕ್ಕೊಳಗಾದ ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ಅಲ್ಲದೇ, ಹುಕ್ಕೇರಿ ಗ್ರೇಡ್ -2 ತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಮತ್ತೊಂದು ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೇ ವಿಪಕ್ಷ ನಾಯಕ ಆರ್.ಅಶೋಕ ಗಮನಕ್ಕೆ ತಂದು ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತೇವೆ. ಅಹಿಂದ ನಾಯಕ ಎಂದು ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸಮಾಜಕ್ಕೆ ಅನ್ಯಾಯವಾಗಿರುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.ಇನ್ನು, ದೆಹಲಿಗೆ ಕಳುಹಿಸಿದ್ದು ವಿಜಯೇಂದ್ರ. ಅವರ ಆದೇಶದಂತೆ ನಾವು ದೆಹಲಿಗೆ ಹೋಗಿದ್ದೆವು ಎಂದು ಅವರೇ ಹೇಳಿದ್ದಾರೆ ಎಂದು ಲೇವಡಿ ಮಾಡಿದ ಅವರು, ಬಿಜೆಪಿಯಲ್ಲಿ ಎಷ್ಟೇ ಜಗಳ ಬಂದರೂ ಪಕ್ಷದ ಚೌಕಟ್ಟು ಅಂತ ಬಂದಾಗ ನಾವೆಲ್ಲರೂ ಒಂದಾಗಿಯೇ ಇರುತ್ತೇವೆ ಎಂದರು. ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯ ಬಂದಾಗ ಎಲ್ಲ ಶಾಸಕ, ಸಚಿವರು ಒಂದಾಗಿ ಧ್ವನಿ ಎತ್ತುತ್ತೇವೆ. ಅಧಿವೇಶನದಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.