ಹುಲಿಕೆರೆ ಇಂದಿರಮ್ಮನ ಕೆರೆ ಎಡದಂಡೆ ಕಾಲುವೆ ಕಾಮಗಾರಿಗೆ ಗ್ರಹಣ!

KannadaprabhaNewsNetwork | Published : Jul 29, 2024 12:45 AM

ಸಾರಾಂಶ

ಅಳ್ನಾವರ ತಾಲೂಕಿನ ಹುಲಿಕೇರಿ ಮತ್ತು ಸುತ್ತಲಿನ ಗ್ರಾಮದ ನೂರಾರು ರೈತರ ಬದುಕಿಗೆ ಆಸರೆ ಆಗಲಿ ಎನ್ನುವ ಉದ್ದೇಶದಿಂದ ಕಳೆದ ನಾಲ್ಕು ದಶಕಗಳ ಹಿಂದೆ ಇಂದಿರಾ ಗಾಂಧಿ ಹೆಸರಿನಲ್ಲಿ ಹುಲಿಕೇರಿಯಲ್ಲಿ ನಿರ್ಮಿಸಲಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವ ಗಾದೆಯಂತಾಗಿದೆ ಹುಲಿಕೇರಿ ಇಂದಿರಮ್ಮನ ಕೆರೆಯ ಸ್ಥಿತಿ. ಗುತ್ತಿಗೆದಾರ, ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಮಧ್ಯೆ ಈ ಕೆರೆಯ ಎಡದಂಡೆ ಕಾಲುವೆಯ ಕಾಮಗಾರಿ ಅಭಿವೃದ್ಧಿಯಿಂದ ಕುಂಠಿತವಾಗಿದೆ. ಟೆಂಡರ್‌ ಆಗಿ ಗುತ್ತಿಗೆದಾರರಿಗೆ ಕಾಮಗಾರಿಗೆ ವರ್ಕ್ ಆರ್ಡರ್‌ ಕೊಡದೇ ಇರುವುದೇ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣ.

ಅಳ್ನಾವರ ತಾಲೂಕಿನ ಹುಲಿಕೇರಿ ಮತ್ತು ಸುತ್ತಲಿನ ಗ್ರಾಮದ ನೂರಾರು ರೈತರ ಬದುಕಿಗೆ ಆಸರೆ ಆಗಲಿ ಎನ್ನುವ ಉದ್ದೇಶದಿಂದ ಕಳೆದ ನಾಲ್ಕು ದಶಕಗಳ ಹಿಂದೆ ಇಂದಿರಾ ಗಾಂಧಿ ಹೆಸರಿನಲ್ಲಿ ಹುಲಿಕೇರಿಯಲ್ಲಿ ನಿರ್ಮಿಸಿದ ಇಂದಿರಮ್ಮನ ಕೆರೆ ಸಂಪೂರ್ಣ ಭರ್ತಿಯಾದರೂ ಆಡಳಿತದ ನಿರ್ಲಕ್ಷ್ಯದಿಂದ ರೈತರು ಕೆರೆ ನೀರನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. 2019-20ರಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ಒಡೆದು ಹೋಗಿರುವ ಕೆರೆಯ ಎಡದಂಡೆ ಕಾಲುವೆಯ ಮರು ನಿರ್ಮಾಣ ಮಾಡದೇ ಇರುವುದು ರೈತರ ಗೋಳಾಟಕ್ಕೆ ಕಾರಣ.

₹ 6 ಕೋಟಿ ಅನುದಾನ:

ಬಿಜೆಪಿ ಆಡಳಿತದ ಅವಧಿಯಲ್ಲಿಯೇ ಈ ಎಡದಂಡೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಉಸ್ತುವಾರಿ ಸಚಿವ ಸಂತೋಷ ಲಾಡ್‌ ಕ್ಷೇತ್ರದಲ್ಲಿಯೇ ಬರೋಬ್ಬರಿ ₹ 6 ಕೋಟಿ ವೆಚ್ಚದ ಈ ಕಾಮಗಾರಿಗೆ ವರ್ಕ್‌ ಆರ್ಡರ್‌ ಕೊಡದೇ ಇರುವುದು ಏತಕ್ಕೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಇಂದಿರಮ್ಮನ ಕೆರೆ 800 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿದ್ದು 1.5 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ಕೆರೆಯಿಂದ ಅಳ್ನಾವರ ಪಟ್ಟಣದ ಸೇರಿದಂತೆ ಸುಮಾರು 10ಕ್ಕೂ ಅಧಿಕ ಹಳ್ಳಿಗಳಿಗೆ ಕೃಷಿ ಕಾಯಕಕ್ಕೆ ನೀರನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಕಳೆದ 2019ರಲ್ಲಿ ಬಂದ ಪ್ರವಾಹಕ್ಕೆ ಕೆರೆ ಕೋಡಿ ಒಡೆದು ಸಾಕಷ್ಟು ಹಾನಿಯಾಗಿತ್ತು. ಜತೆಗೆ ಎಡದಂಡೆ ಕಾಲುವೆಯ ಕಿನಾಲು ಕೂಡಾ ಕೊಚ್ಚಿಹೋಗಿತ್ತು. ಕೆರೆಯ ಕೋಡಿ ಸರಿಪಡಿಸಿದ ಆನಂತರ ಕಿನಾಲು ಕಾಮಗಾರಿಗೆ ಆಗಿನ ಬಿಜೆಪಿ ಸರ್ಕಾರ ಅನುದಾನ ಸಹ ನೀಡಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಕರೆದ ಟೆಂಡರ್‌ಗೆ ಒಬ್ಬರೇ ಗುತ್ತಿಗೆದಾರರು ಭಾಗವಹಿಸಿದಕ್ಕೆ ಮೂರು ಬಾರಿ ಆ ಟೆಂಡರ್‌ ರದ್ದು ಮಾಡಲಾಗಿತ್ತು. ಕೊನೆಗೆ ಗುತ್ತಿಗೆದಾರ ಸತ್ಯ ಡೋಣೂರ ಎಂಬವರು 2023ರ ಡಿಸೆಂಬರ್‌ನಲ್ಲಿ ಈ ಕಾಮಗಾರಿಗೆ ಟೆಂಡರ್‌ ಪಡೆಯಲು ಯಶಸ್ವಿಯಾಗಿದ್ದರು.

ಆದರೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ನೆಪದೊಂದಿಗೆ ಗುತ್ತಿಗೆದಾರರು ಸಮರ್ಪಕ ದಾಖಲೆ, ಠೇವಣಿ ಹಣ ತುಂಬಿಲ್ಲವೆಂಬ ಕಾರಣಕ್ಕೆ ಗುತ್ತಿಗೆದಾರರಿಗೆ ಈ ವರೆಗೂ ಆದೇಶ ಪತ್ರ (ವರ್ಕ್‌ ಆರ್ಡರ್‌) ದೊರೆತಿಲ್ಲ ಎಂದು ಹೇಳಲಾಗುತ್ತಿದೆ. ಜತೆಗೆ ವರ್ಕ್‌ ಆರ್ಡರ್‌ ಕೊಡದೇ ಇರಲು ರಾಜಕೀಯ ಕೈವಾಡಗಳು ಇವೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಗೆದ್ದ ನಂತರ ಬರಲಿಲ್ಲ ಲಾಡ್‌:

1068 ಹೆಕ್ಟೇರ್‌ ಪ್ರದೇಶದ ಕೃಷಿ ಭೂಮಿಗೆ ಸಿಗಬೇಕಾದ ನೀರು ಈ ಕಾಮಗಾರಿ ವಿಳಂಬತೆಯಿಂದ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಮತ್ತು ರೈತರು ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ಥಳೀಯ ಶಾಸಕರು ಮತ್ತು ಉಸ್ತುವಾರಿ ಸಚಿವ ಸಂತೋಷ ಲಾಡ್ ವಿಧಾನಸಭಾ ಚನಾವಣೆಗೂ ಮುಂಚೆ ಅನೇಕ ಬಾರಿ ಕೆರೆಗೆ ಭೇಟಿ ನೀಡಿ ಕಾಲುವೆ ದುರಸ್ತಿಯನ್ನು ಶೀಘ್ರ ಮಾಡಿಸುವ ಭರವಸೆ ನೀಡಿದ್ದರು. ಆದರೆ, ಅಧಿಕಾರ ಬಂದ ಮೇಲೆ ಒಂದು ಬಾರಿಯೂ ಕೆರೆಯ ಕಡೆ ಮುಖ ಮಾಡಿಲ್ಲ. ಸಚಿವರು ಆಗಮಿಸಿ ಕೂಡಲೇ ಎಡದಂಡೆ ಕಾಲುವೆ ಕಾಮಗಾರಿಗೆ ಅವಕಾಶ ಮಾಡಿಕೊಡಬೇಕು ಎಂದು ಕಾಲುವೆ ವ್ಯಾಪ್ತಿಯ ರೈತರು ಲಾಡ್‌ ಅವರಿಗೆ ಆಗ್ರಹಿಸಿದರು. ಪ್ರತಿವರ್ಷ ಬೇಸಿಗೆಯಲ್ಲಿ ಬೆಳೆಗಳು ನೀರಿಲ್ಲದೆ ಹಾಳಾಗುತ್ತಿವೆ. ಊರಲ್ಲಿ ಕೆರೆ ಇದ್ದರೂ ಉಪಯೋಗಕ್ಕೆ ಬಾರದಾಗಿದೆ. ಜಿಲ್ಲಾಡಳಿತವು ಶೀಘ್ರವಾಗಿ ಕಾಲುವೆ ನಿರ್ಮಾಣ ಮಾಡಿಕೊಡುವ ಮೂಲಕ ರೈತರನ್ನು ಬದುಕಿಸಬೇಕು ಎಂದು ಮಹಾಬಳೇಶ್ವರ ನರಗುಂದ ಹೇಳಿದರು.ಅಧಿಕಾರಿಗಳು, ರಾಜಕಾರಣಿಗಳು ಮತ್ತು ಗುತ್ತಿಗೆದಾರರು ತಾಂತ್ರಿಕ ದೋಷದ ನೆಪ ಹೇಳುತ್ತಿದ್ದಾರೆ. ಇದನ್ನು ಬಿಟ್ಟು ಕೆರೆ ಕಾಲುವೆಯ ಕಾಮಗಾರಿ ಶೀಘ್ರವಾಗಿ ಮಾಡಬೇಕು. ರೈತರಿಗೆ ತೊಂದರೆಯಾಗದಂತೆ ಸದೃಢ ಮತ್ತು ಸುಸಜ್ಜಿತ ಕಾಲುವೆ ನಿರ್ಮಾಣವಾಗಬೇಕು. ಎಂದು ಸರ್ವೋದಯ ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವಾಜಿ ಡೊಳ್ಳಿನ ಹೇಳಿದರು.

Share this article