ಕನ್ನಡಪ್ರಭ ವಾರ್ತೆ ಮಡಿಕೇರಿ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ, ಸದಸ್ಯರಾದ ಎಸ್.ಕೆ.ವಂಟಿಗೋಡಿ ಮತ್ತು ಟಿ.ಶ್ಯಾಮ್ ಭಟ್ ಅವರು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಯರವ ಸಮುದಾಯ ವಸತಿ ರಹಿತ ಕುಟುಂಬದವರ ಹಾಡಿಗೆ ಬುಧವಾರ ಭೇಟಿ ನೀಡಿ ಕುಟುಂಬದವರ ಜೊತೆ ಸಂವಾದ ನಡೆಸಿದರು.
ನಿವೇಶನ, ಮನೆ ಇಲ್ಲದಿರುವುದು, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸಂಪರ್ಕ ಇಲ್ಲದಿರುವುದು, ಟಾರ್ಪಲ್ ಕಟ್ಟಿಕೊಂಡು ಜೀವನ ದೂಡುತ್ತಿರುವುದನ್ನು ಗಮನಿಸಿ ನೋವು ವ್ಯಕ್ತಪಡಿಸಿದರು.ಹಾಡಿ ಜನರ ಜೊತೆ ಸಂವಾದ ನಡೆಸಿದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿಸುವಂತೆ ಸಲಹೆ ಮಾಡಿದರು.
ಹತ್ತಿರದಲ್ಲಿಯೇ ಏಕಲವ್ಯ ಮಾದರಿ ವಸತಿ ಶಾಲೆ ಇದ್ದು, ಅಲ್ಲಿಗೆ ಸೇರ್ಪಡೆ ಮಾಡಬೇಕು. ಶಿಕ್ಷಣದಿಂದ ಯಾರೂ ಸಹ ವಂಚಿತರಾಗಬಾರದು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ಮಾಡಿದರು.ಅಲ್ಲಿನ ಯರವ ಸಮುದಾಯದ ಶೋಭಾ ಮಾತನಾಡಿ, ಜಿಲ್ಲೆಯ ವಿವಿಧ ಭಾಗದ ಲೈನ್‌ಮನೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದೆವು. ಸದ್ಯ ಕಳೆದ 6 ವರ್ಷಗಳಿಂದ ಬಾಳುಗೋಡು ಪೈಸಾರಿ ಜಾಗದಲ್ಲಿ ಟಾರ್ಪಲ್ ಹೊದಿಕೆ ನಿರ್ಮಾಣ ಮಾಡಿ ಚಳಿ, ಮಳೆ, ಗಾಳಿಯನ್ನು ಎದುರಿಸಿ ವಾಸ ಮಾಡುತ್ತಿದ್ದೇವೆ. ನಮಗೆ ನಿವೇಶನ ಹಕ್ಕು ಪತ್ರ ನೀಡಿಲ್ಲ, ಮನೆ ಇಲ್ಲ, ರಾತ್ರಿ ವೇಳೆಯಲ್ಲಿ ಹಾವುಗಳ ಭಯದಿಂದ ಎಚ್ಚರವಾಗಿ ನಿದ್ರೆಯಿಲ್ಲದೆ ಪ್ರತಿನಿತ್ಯ ದಿನ ಕಳೆಯುತ್ತಿದ್ದು, ಬದುಕು ಸಂಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಆಹಾರ ಇಲಾಖೆಯಿಂದ 5 ಕೆ.ಜಿ.ಅಕ್ಕಿ ಸಾಲುತ್ತಿಲ್ಲ, ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡಿದರೆ ಮಾತ್ರ ಊಟ. ಇಲ್ಲದಿದ್ದಲ್ಲಿ ಉಪವಾಸದಿಂದ ಮಲಗಬೇಕಾದ ಪರಿಸ್ಥಿತಿ ಇದೆ ಎಂದು ನೋವು ತೋಡಿಕೊಂಡರು.ಕುಡಿಯುವ ನೀರನ್ನು ಒಂದು ಕಿ.ಮೀ. ದೂರದಿಂದ ಹೊತ್ತುಕೊಂಡು ಬರುತ್ತಿದ್ದೇವೆ. ವಿದ್ಯುತ್ ಸಂಪರ್ಕ ಇಲ್ಲದೆ ಪರಿತಪಿಸುತ್ತಿದ್ದೇವೆ. ಕೂಡಲೇ ಕುಡಿಯುವ ನೀರು ಒದಗಿಸಬೇಕು. ಹಾಗೆಯೇ ನಿವೇಶನ ಹಕ್ಕುಪತ್ರ ದೊರೆಯಬೇಕು. ಜೊತೆಗೆ ಮನೆ ನಿರ್ಮಿಸಿಕೊಡಬೇಕು ಎಂದು ಮಾನವ ಹಕ್ಕು ಆಯೋಗದ ಅಧ್ಯಕ್ಷರಲ್ಲಿ ಯರವ ಕುಟುಂಬಸ್ಥರು ಮನವಿ ಮಾಡಿದರು.
ಸಂವಾದ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾನವ ಹಕ್ಕು ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಇಂದಿನಿಂದಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ಕಂದಾಯ ಇಲಾಖೆಯಿಂದ ಜಾಗವನ್ನು ತಾಲೂಕು ಪಂಚಾಯಿತಿಗೆ ಒದಗಿಸಲಾಗಿದ್ದು, ಲೇಔಟ್(ಭೂ ನಕಾಶೆ) ತಯಾರಾದ ನಂತರ ಹಕ್ಕುಪತ್ರ ವಿತರಣೆಗೆ ಕ್ರಮವಹಿಸಲಾಗುತ್ತದೆ. ಈ ಕೆಲಸಗಳು ಇನ್ನು 20 ದಿನದಲ್ಲಿ ಆಗಬೇಕಿದೆ. ಇಲ್ಲಿನ ಸ್ಥಿತಿಗತಿ ಹಾಗೂ ಪ್ರಗತಿ ಸಂಬಂಧ ಆಗಾಗ ಮಾಹಿತಿ ಪಡೆಯಲಾಗುತ್ತದೆ ಎಂದು ಹೇಳಿದರು.ಐಟಿಡಿಪಿ ಇಲಾಖೆಯ ಅಧಿಕಾರಿ ಹೊನ್ನೇಗೌಡ ಅವರು ಮಕ್ಕಳ ವಿಧ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಗೆ ಸೇರ್ಪಡೆಗೆ ಕ್ರಮ ವಹಿಸಲಾಗುವುದು. ಯರವ ಸಮುದಾಯದವರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾನವ ಹಕ್ಕು ಆಯೋಗಕ್ಕೆ ತಿಳಿಸಿದರು.
ತಾ.ಪಂ.ಇಒ ಅಪ್ಪಣ್ಣ ಹಾಗೂ ಬಿಟ್ಟಂಗಾಲ ಗ್ರಾ.ಪಂ.ಪಿಡಿಒ ವಿಶ್ವನಾಥ್ ಅವರು ಗ್ರಾಮಸಭೆಯಲ್ಲಿ ನಿರ್ಧರಿಸಿ ನಿವೇಶನ ಒದಗಿಸಲು ಮುಂದಾಗಲಾಗುವುದು ಎಂದು ಹೇಳಿದರು.ಬೆಂಗಳೂರಿನ ಎಚ್.ಎಂ.ವೆಂಕಟೇಶ್ ಮಾತನಾಡಿ, ಬಾಳುಗೋಡುವಿನಲ್ಲಿ ಯರವ ಹಾಡಿಯಲ್ಲಿ 21 ಕುಟುಂಬಗಳಿದ್ದು, ಪ್ರತೀ ಕುಟುಂಬಕ್ಕೂ ಕನಿಷ್ಠ 5 ಸೆಂಟ್ ಜಾಗ ನೀಡಬೇಕು ಎಂದು ಮನವಿ ಮಾಡಿದರು.
ಕುರಿ, ಕೋಳಿ, ಹಂದಿ ಸಾಕಾಣಿಕೆಗೆ ಸಹಕಾರ ನೀಡಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ ಕೋರಿದರು. ಇದಕ್ಕೆ ಹೋರಾಟಗಾರರಾದ ನಂಜರಾಜ ಅರಸು ಅವರು ಧ್ವನಿಗೂಡಿಸಿದರು.ಪ್ರಮುಖರಾದ ಗಪ್ಪು, ಕುಣಿಗಲ್ ನರಸಿಂಹ ಮೂರ್ತಿ ಮತ್ತು ಕುಣಿಗಲ್ ನಾಗರಾಜ್ ಅವರು ಇಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ತಹಶೀಲ್ದಾರ್ ರಾಮಚಂದ್ರ, ಪೊಲೀಸ್ ಅಧಿಕಾರಿಗಳು, ಯರವ, ಪಣಿಯ ಆದಿವಾಸಿ ಜನರು ಇದ್ದರು.