ಹಾನಗಲ್ಲ: ಸಂಸ್ಕಾರಯುತ ಶಿಕ್ಷಣ ದೂರವಾಗಿ, ವ್ಯಕ್ತಿತ್ವದ ಮಾನದಂಡ ಮಾನವೀಯ ಮೌಲ್ಯಗಳಿಲ್ಲದೆ, ಸಾಮಾಜಿಕ ಅಭದ್ರತೆಯೊಂದಿಗೆ ಭಯ-ಭೀತಿಯ ನಡುವೆ ಜಗತ್ತು ಓಡುತ್ತಿದೆ ಎಂದು ನಿವೃತ್ತ ಶಿಕ್ಷಕ ಬಿ.ಸಿ. ಬಹಾದ್ದೂರ ದೇಸಾಯಿ ಖೇದದಿಂದ ನುಡಿದರು.
ಇಲ್ಲಿಯ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ, 50 ವರ್ಷಗಳಾಚೆ ತಮಗೆ ವಿದ್ಯಾದಾನ ಮಾಡಿದ ಎನ್‌ಸಿಜೆಸಿ ಪ್ರೌಢಶಾಲೆಯ ಗುರುವೃಂದಕ್ಕೆ ಗೌರವ ವಂದನೆ ಸಲ್ಲಿಸುವ ಸುವರ್ಣ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಕಾಲ ಬದಲಾಗಿದೆ. ಆದರೆ ಈ ಕಾಲದಲ್ಲಿ ಬದುಕುವ ಜನಾಂಗಕ್ಕೆ ಅಗತ್ಯವಾದ ಮೌಲ್ಯ ಶಿಕ್ಷಣ ಮಾಯವಾಗಿ, ತಂದೆ-ತಾಯಿ, ಗುರು-ಬಂಧುಗಳನ್ನು ಪ್ರೀತಿಸಲಾರದ ಮನೋವೈಕಲ್ಯ ಸಮಾಜಕ್ಕೆ ಕಾಡುತ್ತಿದೆ. ಪರೀಕ್ಷಾ ಪದ್ಧತಿಗಳು ಜಾಳಾಗಿದೆ. ಮೊಬೈಲ್, ಆನ್‌ಲೈನ್ ಕ್ಲಾಸುಗಳ ಭರಾಟೆಯಲ್ಲಿ ಪುಸ್ತಕದ ಓದು ದೂರ ಸರಿಯುತ್ತಿದೆ. ಯುವಕರಿಗೆ ಪದವಿಗಳಿವೆ. ಜೀವನ ಪದ್ಧತಿಗಳೇ ಗೊತ್ತಿಲ್ಲ. ಹವ್ಯಾಸಗಳು ಬದಲಾಗಿ ವ್ಯಕ್ತಿತ್ವದ ಮಾನದಂಡಗಳೇ ಇಲ್ಲದಾಗಿವೆ ಎಂದರು.ನಿವೃತ್ತ ಶಿಕ್ಷಕ ಎ.ಐ. ಮಳೆಣ್ಣನವರ ಮಾತನಾಡಿ, ಮನಸ್ಸು ಹೃದಯ ಶುದ್ಧವಾಗಿದ್ದವರೇ ನಿಜವಾಗಿ ದೊಡ್ಡವರು. ಹಣ ಅಂತಸ್ತಿನಿಂದ ದೊಡ್ಡಸ್ತಿಕೆ ಅಳೆಯುವ ಕಾಲದಲ್ಲಿದ್ದೇವೆ. ಅಂದು ಶಿಕ್ಷಕ ವೃತ್ತ ಸ್ವಾಭಿಮಾನದಿಂದ ಕೂಡಿತ್ತು. ವಿದ್ಯಾರ್ಥಿಗಳಿಗೆ ಶಿಕ್ಷಕನೇ ಭವಿಷ್ಯದ ಬದುಕಿನ ರೂವಾರಿಯಾಗಿದ್ದ. ಈಗ ಶಿಕ್ಷಣ ಪರಿ ಅರ್ಥವಾಗದ ನಾಗಲೋಟದಲ್ಲಿದೆ ಎಂದರು.
ನಿವೃತ್ತ ಶಿಕ್ಷಕ ಕೆ.ಎಲ್. ದೇಶಪಾಂಡೆ, ನಿವೃತ್ತ ಶಿಕ್ಷಕ ವಿ.ಬಿ. ದೀಕ್ಷಿತ್ ಮಾತನಾಡಿದರು.50 ವರ್ಷಗಳ ಹಿಂದೆ ಎನ್‌ಸಿಜೆಸಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಟಿ.ಎನ್. ಕಾಮನಹಳ್ಳಿ, ಕೆ.ಎಲ್. ದೇಶಪಾಂಡೆ, ಬಿ.ಸಿ. ಬಹದ್ದೂರದೇಸಾಯಿ, ಎ.ಐ. ಮಳೆಣ್ಣನವರ, ವಿ.ಬಿ. ದೀಕ್ಷಿತ ದಂಪತಿಗಳನ್ನು ಅಂದಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಮುದಾಯದಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ಮಹೇಶ ದೇಶಪಾಂಡೆ, ಬಿ.ಎಸ್. ಅಕ್ಕಿವಳ್ಳಿ ಇದ್ದರು. ಕವಿತಾ ದೇಶಪಾಂಡೆ ಪ್ರಾರ್ಥನೆ ಹಾಡಿದರು. ನಿರಂಜನ ಗುಡಿ ಕಾರ್ಯಕ್ರಮ ನಿರೂಪಿಸಿದರು.