ರೆಡ್‌ಕ್ರಾಸ್ ಸಂಸ್ಥೆಯಿಂದ ಮಾನವೀಯ ನೆಲೆಯಲ್ಲಿ ಸೇವೆ: ಬಸ್ರೂರು ರಾಜೀವ ಶೆಟ್ಟಿ

KannadaprabhaNewsNetwork | Published : Apr 12, 2024 1:07 AM

ಸಾರಾಂಶ

ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್‌ಕ್ರಾಸ್ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ ಪ್ರಥಮ ಚಿಕಿತ್ಸೆ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಮಾನವ ಜೀವನ ಮತ್ತು ಆರೋಗ್ಯವನ್ನು ರಕ್ಷಿಸಲು ಇರುವ ಸ್ವಯಂ ಪ್ರೇರಿತ ಮಾನವೀಯ ಸಂಸ್ಥೆಯಾಗಿದ್ದು, ವಿಪತ್ತು, ತುರ್ತು ಪರಿಸ್ಥಿತಿ ಸಮಯದಲ್ಲಿ ಪರಿಹಾರ ನೀಡುವುದು, ದುರ್ಬಲ ಜನರ ಮತ್ತು ಸಮುದಾಯಗಳ ಆರೋಗ್ಯವನ್ನು ಕಾಪಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದರು.

ಅವರು ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್‌ಕ್ರಾಸ್ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ ಪ್ರಥಮ ಚಿಕಿತ್ಸೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ಯುವ ರೆಡ್‌ಕ್ರಾಸ್ ಸಂಸ್ಥೆಯು ಪ್ರಥಮ ಚಿಕಿತ್ಸೆಯಲ್ಲಿ ಮಾಡಿದ ಸಾಧನೆಯ ಬಗ್ಗೆ ಹಾಗೂ ರಕ್ತದಾನ, ಅಂಗಾಂಗ ದಾನ, ನಿಧಿ ಸಂಗ್ರಹಿಸುವ ಚಟುವಟಿಕೆಗಳು, ಪ್ರವಾಹ ಪರಿಹಾರ ಅಭಿಯಾನಗಳು ಮತ್ತು ವಿಪತ್ತು ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ, ಯುವಜನತೆಯು ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಚಟುವಟಿಕೆಯಲ್ಲಿ ತಮ್ಮನ್ನುತಾವು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಪ್ರಥಮ ಚಿಕಿತ್ಸಾ ತರಬೇತಿದಾರ ಅಶ್ವಿನ್ ಕುಮಾರ್ ಎಂ. ಅವರು ಪ್ರಥಮ ಚಿಕಿತ್ಸಾ ಕೌಶಲ್ಯ, ಮೌಲ್ಯ ಮತ್ತು ವಿವಿಧ ಸಂದರ್ಭಗಳಲ್ಲಿ ಅದನ್ನು ಹೇಗೆ ನೀಡಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದ ಅವರು, ವಿದ್ಯಾರ್ಥಿಗಳು ತಾವು ಪಡೆದ ಮಾಹಿತಿಯನ್ನು ಇತರ ವಿದ್ಯಾರ್ಥಿಗಳಿಗೆ ನೀಡುವಂತೆ ತಿಳಿಸಿದರು.

ಗಾಯಗಳು, ರಕ್ತಸ್ರಾವ, ಸುಟ್ಟಗಾಯಗಳು, ಶಾಖದ ಹೊಡೆತ, ವಿಷದ ಹಾವು ಕಡಿತ, ನೀರಿನಲ್ಲಿ ಮುಳುಗು, ಮೂರ್ಛೆ ಮತ್ತು ಪ್ರಜ್ಞಾಹೀನತೆ ಮುಂತಾದ ಸ್ಥಿತಿಯಲ್ಲಿ ಪ್ರಥಮಚಿಕಿತ್ಸೆ ಹೇಗೆ ನೀಡಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ಮತ್ತು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಷ್ಟ್ರೀಯ ಸೇವಾಯೋಜನೆಯ ಸಂಯೋಜಕ ನಾಗರಾಜ್ ರಾವ್ ಸ್ವಾಗತಿಸಿದರು. ಪ್ರಿನ್ಸಿಟಾ ಮಿನೇಜಸ್ ನಿರೂಪಿಸಿದರು. ಮೈತ್ರಿ ಶೆಟ್ಟಿ ವಂದಿಸಿದರು.

Share this article