ಮಾನವತೆ ಸಾರುವ ಸೇವೆ ಅವಶ್ಯಕ: ಡಾ.ರವಿ ಹೆಗಡೆ

KannadaprabhaNewsNetwork | Published : Jul 30, 2024 1:30 AM

ಸಾರಾಂಶ

ಶಿರಾಳಕೊಪ್ಪದ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ಮಾನವತೆಯನ್ನು ಸಾರುವ ಸೇವೆಯಿಂದಲೇ ಸಮಾಜಕ್ಕೆ ಒಳಿತು ಎಂಬ ಧ್ಯೇಯದೊಂದಿಗೆ ನಡೆಸುವ ಸೇವಾ ಕಾರ್ಯಕ್ರಮ ಅತ್ಯಂತ ಅವಶ್ಯಕವಾಗಿದೆ ಎಂದು ಸಿದ್ದಾಪುರದ ಮಾಜಿ ಜಿಲ್ಲಾ ಗವರ್ನರ್ ಲಯನ್ಸ್‌ ಡಾ.ರವಿ ಹೆಗಡೆ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಶ್ರೀ ವಾಸವಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶಿರಾಳಕೊಪ್ಪ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ, ಹೂವಿನ ಮನೆ ಪದಗ್ರಹಣ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ, ಪ್ರಸ್ತುತ ಆಧುನಿಕ ತಂತ್ರಜ್ಞಾನದ ಸುಳಿಯಲ್ಲಿ ಸಮಾಜ ಸಿಲುಕಿ ನಲುಗುತ್ತಿದೆ. ಮುಂದೊಂದು ದಿನ ಮಾನವೀಯತೆರಹಿತ ಸಮಾಜ ಅಪಾಯದಲ್ಲಿ ಸಿಲುಕಿ ಕೊಳ್ಳಬಹುದಾಗಿದೆ. ಅಂತಹ ಸಂದರ್ಭದಲ್ಲಿ ಲಯನ್ಸ್ ನಂತಹ ಸೇವಾ ಸಂಸ್ಥೆಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದರು.

ಲಯನ್ಸ್ ಕ್ಲಬ್ ಶಿರಾಳಕೊಪ್ಪ ಒಂದು ಚಿಕ್ಕ ಸರ್ಕಾರಿ ಸಂಸ್ಥೆಯು ಸಲ್ಲಿಸುವಷ್ಟು ಸೇವೆಯನ್ನು ಕಳೆದ ವರ್ಷ ನೀಡಿದೆ. ಅದೇ ರೀತಿ ಈ ವರ್ಷವೂ ಕ್ಲಬ್ ಅತಿ ಹೆಚ್ಚಿನ ಸೇವೆಯೊಂದಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಒಳಿತಿಗೆ ಕೆಲಸ ಮಾಡಿ ಸಮಾಜಕ್ಕೆ ಒಂದು ಪ್ರೇರಣಾ ಶಕ್ತಿ ಆಗಲಿ ಎಂದು ಶುಭ ಹಾರೈಸಿದರು.

ಪ್ರತಿಭಾ ಇಸ್ಲೂರ್ ಅಧ್ಯಕ್ಷರಾಗಿ ವಸುಮತಿ ಅಮಿತ್ ಕಾರ್ಯದರ್ಶಿಯಾಗಿ ಮಂಗಳಾ ರಾಜೀವ್ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಸಮಾರಂಭದಲ್ಲಿ ವೈದ್ಯ ದಿನಾಚರಣೆ ಅಂಗವಾಗಿ ತೊಗರ್ಸಿ ಗ್ರಾಮದ ಡಾಕ್ಟರ್ ನೂತನ್ ಕುಮಾರ್ ಅವರನ್ನು ಅವರ ಹತ್ತು ವರ್ಷಗಳ ಗ್ರಾಮೀಣ ಸೇವೆಯನ್ನು ಗುರುತಿಸಿ ಸನ್ಮಾನಿ ಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಗಿಲ್ ವಿಜಯೋತ್ಸವದ ಜ್ಞಾಪಕಾರ್ಥ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ದೀಪ ಬೆಳಗಿಸಿ ಆಚರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ 2023-24ರ ಸಾಲಿನ ಶಿರಾಳಕೊಪ್ಪ ಅಧ್ಯಕ್ಷರಾದ ಲಯನ್ ಶಿವಯೋಗಿ, ಕಾರ್ಯದರ್ಶಿ ಗಿರೀಶ್, ಖಜಾಂಜಿ ಯೋಗಿರಾಜ್ ವಲಯ ಅಧ್ಯಕ್ಷರಾದ ಪ್ರಭಾವತಿ ಶ್ರೀಧರ್ ಮಾಜಿ ಜಿಲ್ಲಾ ಗವರ್ನರ್‌ಗಳಾದ ಮಂಜಪ್ಪ ಮತ್ತು ಎಂ.ಕೆ.ಭಟ್ ರವರು ಉಪಸ್ಥಿತರಿದ್ದರು.

ಲಯನ್ ಆಶಾ ಮಂಜುನಾಥ್ ಪ್ರಾರ್ಥಿಸಿದರು. ಲಯನ್ ಶಿವಯೋಗಿ ಎಲ್ಲರನ್ನು ಸ್ವಾಗತಿಸಿದರು. ಲಯನ್ ಮಂಗಳಾ ರಾಜೀವ್ ಎಲ್ಲರನ್ನು ವಂದಿಸಿದರು. ಲತಾ ಯೋಗಿರಾಜ್ ಮತ್ತು ಪ್ರಿಯದರ್ಶಿನಿ ಕಾರ್ಯಕ್ರಮದ ನಿರೂಪಣೆ ನಡೆಸಿದರು.

Share this article