ಪ್ರಕೃತಿದತ್ತ ವಾತಾವರಣದಲ್ಲಿ ಮನುಷ್ಯತ್ವ ನೆಲೆಯೂರಬೇಕು: ನಿಂಗಯ್ಯ

KannadaprabhaNewsNetwork | Published : Mar 21, 2025 12:33 AM

ಸಾರಾಂಶ

ಚಿಕ್ಕಮಗಳೂರು, ಪ್ರಕೃತಿದತ್ತ ವಾತಾವರಣದಲ್ಲಿ ಮನುಷ್ಯತ್ವ ನೆಲೆಯೂರಬೇಕು. ಹಳ್ಳಿಗಳೆಂದರೆ ಸಮಾನತೆ ಕೇಂದ್ರಗಳಾಗಬೇಕೇ ಹೊರತು ಮೇಳು ಕೀಳು ಎಂಬ ತಾರತಮ್ಯ ಇರಬಾರದು. ಕಾಲೋನಿಗಳು ನಶಿಸಿ, ಸರ್ವರು ಒಂದೇ ಎಂಬ ಮನೋಭಾವನೆ ಹೊಂದಬೇಕು ಎಂದು ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಬಿ.ಬಿ.ನಿಂಗಯ್ಯ ಹೇಳಿದರು.

- ಶೋಷಿತರ ಸಂಘರ್ಷ ದಿನಾಚರಣೆ । ಭಾರತ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಕೃತಿದತ್ತ ವಾತಾವರಣದಲ್ಲಿ ಮನುಷ್ಯತ್ವ ನೆಲೆಯೂರಬೇಕು. ಹಳ್ಳಿಗಳೆಂದರೆ ಸಮಾನತೆ ಕೇಂದ್ರಗಳಾಗಬೇಕೇ ಹೊರತು ಮೇಳು ಕೀಳು ಎಂಬ ತಾರತಮ್ಯ ಇರಬಾರದು. ಕಾಲೋನಿಗಳು ನಶಿಸಿ, ಸರ್ವರು ಒಂದೇ ಎಂಬ ಮನೋಭಾವನೆ ಹೊಂದಬೇಕು ಎಂದು ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಬಿ.ಬಿ.ನಿಂಗಯ್ಯ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಭಾರತ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ ಮಹಾಡ್ ಸತ್ಯಾಗ್ರಹದ ನೆನಪಿಗಾಗಿ ಗುರುವಾರ ಏರ್ಪಡಿಸಿದ್ದ ಶೋಷಿತರ ಸಂಘರ್ಷ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಪ್ರಪಂಚದಲ್ಲಿ ಗಾಳಿ, ನೀರು, ಬೆಂಕಿ ಪ್ರಾಕೃತಿಕವಾಗಿ ಬಂದಿರುವ ಸ್ವತ್ತಾಗಿದ್ದು ಪ್ರತಿ ಜೀವರಾಶಿಗೂ ಬಳಸಿ ಕೊಳ್ಳುವ ಹಕ್ಕಿದೆ. ಸವರ್ಣೀಯರೆಂಬ ಕಾರಣಕ್ಕೆ ಕೆರೆ ನೀರನ್ನು ಮುಟ್ಟದಂತೆ ಪಶುವಿನಂತೆ ವರ್ತಿಸುವ ಸಮಾಜದ ವಿರುದ್ಧ ಅಂಬೇಡ್ಕರ್ ಪಣ ತೊಟ್ಟು ಚಳುವಳಿ ಆರಂಭಿಸಿ, ಯಶಸ್ವಿಯಾದ ಬಳಿಕ ಸಾವಿರಾರು ಮಂದಿಯೊಂದಿಗೆ ತೆರಳಿ ಮಹಡ್ ಕೆರೆ ನೀರು ಸೇವಿಸಿ ಸಮಾನತೆ ಸಾರಿದರು ಎಂದರು. ಸ್ವಾತಂತ್ರ್ಯಕ್ಕೂ ಮುನ್ನ ಪರಿಶಿಷ್ಟರ ಬದುಕು ಮೂರಾಬಟ್ಟೆಯಾಗಿತ್ತು. ಗ್ರಾಮದ ಬಾವಿ, ಕೆರೆಗಳಲ್ಲಿ ನೀರು ಸೇವಿಸುವಂತಿಲ್ಲ. ನಡೆದಾಡುವ ಹಾದಿಯಲ್ಲಿ ಬೆನ್ನಿಂದೆ ಪರಕೆ ಕಟ್ಟಿಕೊಂಡು ಹೆಜ್ಜೆ ಗುರುತು ಸಿಗದಂತೆ ಗುಡಿಸಿಕೊಂಡು ಹೋಗುವ ಸ್ಥಿತಿಯಿತ್ತು, ಅಸ್ಪೃಶ್ಯರಾಗಿ ಬದುಕಿದ್ದವರಿಗೆ ಅಂಬೇಡ್ಕರ್, ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ದರು ಎಂದು ಹೇಳಿದರು.ಶೋಷಿತರು, ಅಸ್ಪೃಶ್ಯರೆಂಬ ಕಾರಣಕ್ಕೆ ಮಾನವ, ಮಾನವರನ್ನೇ ಕೀಳಾಗಿ ಕಾಣುವುದು, ಅವಮಾನಿಸುವುದು ನಡೆಯಿತು. ಕೆಳವರ್ಗದ ಜನರೆಂಬ ಹಿನ್ನೆಲೆಯಲ್ಲಿ ಮಲ ಹೋರುವ ಪದ್ಧತಿಯಲ್ಲಿ ಪರಿಶಿಷ್ಟರನ್ನು ತೊಡಗಿಸುವ ಕ್ರೂರತನದ ಕಾಲವಿತ್ತು. ಬಹುಸಂಖ್ಯಾತ ಸಮುದಾಯವನ್ನು ಬಲಾಡ್ಯರು ಜೀತದಾಳಾಗಿಸಿ ದುಡಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.

ಮಹಡ್ ಸತ್ಯಾಗ್ರಹದ ಬಗ್ಗೆ ಉಪನ್ಯಾಸ ನೀಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್ ಅಂಭೇಡ್ಕರ್ ಎಂದರೆ ಜಯಂತಿ, ಪುಣ್ಯತಿಥಿ ಅಥವಾ ಕೋರೆಗಾಂವ್‌ ಆಗಿತ್ತು. ಆದರೀಗ ದಸಂಸ ಸಂಘಟನೆ ಮಹಡ್ ಶೋಷಿತರ ದಿನಾಚರಣೆ ಆಚರಿಸಿ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಮಾತನಾಡಿ, ಮಹಡ್ ಚಳುವಳಿಗೂ ಮುನ್ನ ಪರಿಶಿಷ್ಟರನ್ನು ನಾಯಿ, ನರಿ ಗಳಿಗಿಂತಲೂ ಕಡೆಗಣಿಸಲಾಗಿತ್ತು. ಇದನ್ನರಿತ ಅಂಬೇಡ್ಕರ್ ಮಹಡ್ ಚಳುವಳಿ ರೂಪಿಸಿ, 1927 ರಲ್ಲಿ ಯಶಸ್ವಿಗೊಂಡಿತ್ತು. ಈ ಚಳುವಳಿ ಇಂದು 98 ವರ್ಷಗಳು ಪೂರೈಸುತ್ತಿದೆ ಎಂದರು.

ಶೋಷಿತರ ಪರವಾಗಿ ಮೊದಲ ಚಳುವಳಿ ಕಿಚ್ಚನ್ನು ಹಬ್ಬಿಸಿದ ಅಂಬೇಡ್ಕರ್ ಸಂವಿಧಾನ ರಚಿಸುವ ಮೂಲಕ ಮನುಷ್ಯ ಮನುಷ್ಯನಿಗೆ ಗೌರವಿಸುವ ಸಂಸ್ಕಾರ ಪರಿಚಯಿಸಿದರು. ಪ್ರಸ್ತುತ ಕಾಲಮಾನದಲ್ಲಿ ಪರಿಶಿಷ್ಟರನ್ನು ಅಸ್ಪೃಶ್ಯರಂತೆ ಕಾಣುವ ಸ್ಥಿತಿಯಿದೆ. ಹೀಗಾಗಿ ಶಿಕ್ಷಣ ಹಾಗೂ ಅಧಿಕಾರ ಪಡೆದುಕೊಂಡಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಸಂಸ ತಾಲೂಕು ಪ್ರಧಾನ ಸಂಚಾಲಕ ಮಂಜುನಾಥ್ ನಂಬಿಯಾರ್, ರಾಜ್ಯಸಮಿತಿ ಸದಸ್ಯ ಮಲ್ಲೇಶ್, ಪ್ರಗತಿಪರ ಚಿಂತಕರಾದ ಎಚ್.ಎಚ್.ದೇವರಾಜ್, ರವೀಶ್ ಬಸಪ್ಪ, ಮುಖಂಡರಾದ ಜವರಯ್ಯ, ರಘು, ರಮೇಶ್, ಚಂದ್ರಶೇಖರ್, ಕೃಷ್ಣಮೂರ್ತಿ, ಬಾಲಕೃಷ್ಣ ಇದ್ದರು.

20 ಕೆಸಿಕೆಎಂ 3ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶೋಷಿತರ ಸಂಘರ್ಷ ದಿನಾಚರಣೆಯನ್ನು ಬಿ.ಬಿ. ನಿಂಗಯ್ಯ ಅವರು ಉದ್ಘಾಟಿಸಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

-------------------------------------

Share this article