ಕನ್ನಡಪ್ರಭ ವಾರ್ತೆ ಜಮಖಂಡಿ
ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ 6ನೇ ದಿನವಾದ ಭಾನುವಾರ ಸಂಜೆ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮನ್ನು ಬದಲಾಯಿಸಲು ಸಂತ ಮಹಾಂತರು ಹುಟ್ಟಿಬರಬೇಕಾಗಿಲ್ಲ. ನಮಗೆ ನಾವೇ ಬದಲಾಗಬೇಕು. ಶರಣರ ಮುಂದುವರಿದ ಪೀಳಿಗೆಯಾಗಿ ಇಂದಿನವರ ಜವಾಬ್ದಾರಿ ಏನು? ಎಂದು ಪ್ರಶ್ನಿಸಿದ ಅವರು, ನಮ್ಮ ಸಾಹಿತ್ಯ, ಸಾಧ್ಯತೆಗಳಿಗೆ ನಾವೇ ಉತ್ತರವಾಗಬೇಕು. ಯುವಕರು ಸನ್ಮಾರ್ಗದಲ್ಲಿ ಸಾಗದಿದ್ದರೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.ಹೃದಯರೋಗತಜ್ಞ ನಾಡೋಜ ಡಾ.ಎಚ್.ಜಿ. ದಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬಸವಣ್ಣನವರನ್ನು ವಿಶ್ವಗುರು ಎಂದು ಹೇಳುತ್ತೇವೆಯೇ ಹೊರತು ಅವರ ತತ್ವಾದರ್ಶಗಳನ್ನು ಪಾಲಿಸುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಚೌಕಟ್ಟಿನಲ್ಲಿಟ್ಟು ಅವರ ಸಂದೇಶಗಳ ಪ್ರಯೋಜನ ಇಡೀ ಸಮಾಜಕ್ಕೆ ತಲುಪದಂತೆ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಯೋಗಿ ಬಂದಾನೊ ಭೋಗ ಸುಖವ ತ್ಯಾಗ ಮಾಡಿ ಎಂಬ ಹಾಡು ಹೇಳಿ ಸದ್ಭಕ್ತರನ್ನು ರೋಮಾಂಚನಗೊಳಿಸಿದರು. ಝುಂಜರವಾಡದ ಬಸವರಾಜೇದ್ರ ಶರಣರು ಪ್ರವಚನ ನೀಡಿದರು. ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಮಾತನಾಡಿದರು.
ಗದುಗಿನ ಗವಾಯಿ ರವಿಕುಮಾರ ಬೆಣ್ಣಿ, ತಬಲಾ ವಾದಕ ಹನುಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ಸ್ವಾಗತಿಸಿದರು. ಅಣ್ಣಾಸಾಹೇಬ ಜಗದೇವ ನಿರೂಪಿಸಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಶರಣು ಸಮರ್ಪಿಸಿದರು.