ಎಐ ಯುಗದಲ್ಲೂ ಮಾನವನೇ ನಿರ್ಣಾಯಕ: ರಾಯ್

KannadaprabhaNewsNetwork |  
Published : Nov 29, 2026, 01:45 AM IST
Naresh | Kannada Prabha

ಸಾರಾಂಶ

ಕೃತಕ ಬುದ್ಧಿಮತ್ತೆಯು (ಎಐ) ಉದ್ಯೋಗ ಕ್ಷೇತ್ರವನ್ನೇ ಬದಲಿಸುತ್ತಿರುವ ಈ ಸಂದರ್ಭದಲ್ಲಿ ಮಾನವ ಸಾಮರ್ಥ್ಯ, ವಿಶ್ವಾಸ ಮತ್ತು ಪ್ರಾಮಾಣಿಕತೆಯ ಮಹತ್ವ ಹೆಚ್ಚುತ್ತಿದೆ ಎಂದು ಸಿಸ್ಕೊ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ವಲಯ, ವಾಣಿಜ್ಯ ಮಾರಾಟ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ತ್ರಿದೀಪ್ ರಾಯ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಯಲಹಂಕ

ಕೃತಕ ಬುದ್ಧಿಮತ್ತೆಯು (ಎಐ) ಉದ್ಯೋಗ ಕ್ಷೇತ್ರವನ್ನೇ ಬದಲಿಸುತ್ತಿರುವ ಈ ಸಂದರ್ಭದಲ್ಲಿ ಮಾನವ ಸಾಮರ್ಥ್ಯ, ವಿಶ್ವಾಸ ಮತ್ತು ಪ್ರಾಮಾಣಿಕತೆಯ ಮಹತ್ವ ಹೆಚ್ಚುತ್ತಿದೆ ಎಂದು ಸಿಸ್ಕೊ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ವಲಯ, ವಾಣಿಜ್ಯ ಮಾರಾಟ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ತ್ರಿದೀಪ್ ರಾಯ್ ಅಭಿಪ್ರಾಯಪಟ್ಟರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ), ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 34ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಕೆಲಸ ಮಾಡುವ, ಕಲಿಯುವ ಮತ್ತು ನಿರ್ಧಾರ ತೆಗೆದುಕೊಳ್ಳುವ ರೀತಿಯನ್ನು ಎಐ ಈಗಾಗಲೇ ಬದಲಿಸುತ್ತಿದೆ. ಅದು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ, ಈಗಿರುವ ಉದ್ಯೋಗಗಳ ಸ್ವರೂಪವನ್ನು ಬದಲಿಸಲಿದೆ ಮತ್ತು ಕೆಲವು ಕೌಶಲ್ಯ ಗಳಿಗೆ ಸವಾಲು ನೀಡಲಿದೆ. ಆದರೆ, ಸರಿಯಾದ ಪ್ರಶ್ನೆಗಳನ್ನು ಕೇಳುವಂತಹ, ಸ್ವತಂತ್ರವಾಗಿ ಯೋಚಿಸುವಂತಹ, ಸಂದರ್ಭವನ್ನು ಅರ್ಥಮಾಡಿಕೊಳ್ಳುವಂತಹ ಮತ್ತು ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಕೌಶಲ್ಯ ಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಸಿಗಲಿದೆ. ನಿಮ್ಮ ವೃತ್ತಿಜೀವನದಲ್ಲಿ ಯಾವುದೋ ಒಂದು ಕೆಲಸದಿಂದ ನಿಮಗೆ ಹೆಸರು, ಗೌರವ ದೊರೆಯುವುದಿಲ್ಲ. ಬದಲಿಗೆ ಪ್ರತಿದಿನ ನೀವು ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು ಮುಖ್ಯವಾಗುತ್ತವೆ ಎಂದರು.

ಮಾಹೆ ಕುಲಪತಿ ಡಾ.ಶರತ್ ಕೆ.ರಾವ್ ಮಾತನಾಡಿ, ಸಂಶೋಧನೆಗಳನ್ನು ಮುಂದುವರಿಸುವುದು ಮತ್ತು ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಮಾಹೆ ಆದ್ಯತೆ ನೀಡುತ್ತಿದೆ. ಎಐ ಯುಗದಲ್ಲಿ ವಿಶ್ವವಿದ್ಯಾಲಯಗಳು ಕೇವಲ ತಂತ್ರಜ್ಞಾನ ಬಳಸುವವರನ್ನಷ್ಟೇ ಅಲ್ಲದೆ, ಅದನ್ನೂ ಮೀರಿ ಯೋಚಿಸುವ ಪದವೀಧರರನ್ನು ಸಜ್ಜುಗೊಳಿಸಬೇಕಿದೆ. ಉನ್ನತ ಸಂಶೋಧನೆಗೆ ಮಾಹೆ ಮಾಡಿರುವ ಹೂಡಿಕೆಗಳು ಇದೇ ಆಶಯವನ್ನು ಹೊಂದಿವೆ. ಬೆಂಗಳೂರು ಕ್ಯಾಂಪಸ್‌ನ 25-ಕ್ಯೂಬಿಟ್‌ ಕ್ವಾಂಟಮ್‌ ಹಬ್‌ ಹಾಗೂ ಮಣಿಪಾಲದ ಬಯೋಸೇಫ್ಟಿ ಲೆವೆಲ್‌-3 (ಬಿಎಸ್‌ಎಲ್‌-3) ಪ್ರಯೋಗಾಲಯಗಳೆರಡನ್ನೂ ಹೊಂದಿರುವ ಭಾರತದ ಏಕೈಕ ಖಾಸಗಿ ವಿವಿ ಎಂಬ ಹೆಗ್ಗಳಿಕೆ ಮಾಹೆಗಿದೆ ಎಂದು ಹೇಳಿದರು.

ಮಾಹೆ ಬೆಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ.ಮಧು ವೀರರಾಘವನ್ ಮಾತನಾಡಿ, ಕ್ಯಾಂಪಸ್‌ನಲ್ಲಿ ಬೆಳೆಸಿಕೊಂಡ ಸ್ನೇಹವನ್ನು ಉಳಿಸಿಕೊಳ್ಳಿ, ಅಗತ್ಯವಿದ್ದಾಗ ಹಿಂಜರಿಯದೆ ಸಹಾಯ ಕೇಳಿ ಮತ್ತು ನಿಮ್ಮ ಸಾಧನೆಗೆ ನೆರವಾದ ಕುಟುಂಬ, ಅಧ್ಯಾಪಕರು, ಸ್ನೇಹಿತರು ಹಾಗೂ ಸಿಬ್ಬಂದಿಯನ್ನು ಸದಾ ನೆನಪಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

ಘಟಿಕೋತ್ಸವದಲ್ಲಿ 18 ಪಿಎಚ್‌ಡಿ ಸಂಶೋಧನಾರ್ಥಿಗಳು ಸೇರಿದಂತೆ ಒಟ್ಟು 1,082 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದೇ ವೇಳೆ, ಅತ್ಯುತ್ತಮ ಸಾಧನೆಗೈದ ಇಬ್ಬರು ಪದವೀಧರರಿಗೆ ಡಾ. ಟಿ.ಎಂ.ಎ.ಪೈ ಚಿನ್ನದ ಪದಕ- 2026 ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಡಿಸೆಂಬರ್‌ 10ರಂದು ಸುವರ್ಣಸೌಧದ ಎದುರು ಉಪವಾಸ
ಜನಪ್ರತಿನಿಧಿಗಳ ಸ್ನೇಹಸಂಗಮಕ್ಕೆ ಸಾಕ್ಷಿಯಾದ ಹಾವೇರಿ