ಕ್ರಿಕೆಟ್‌ ಬೆಟ್ಟಿಂಗ್ ಆ್ಯಪ್‌ ಬಳಸಿ ನೂರಾರು ಕೋಟಿ ವಹಿವಾಟು

KannadaprabhaNewsNetwork |  
Published : Jun 03, 2026, 01:45 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ರಾಷ್ಟ್ರದಾದ್ಯಂತ ಅಕ್ರಮ ಕ್ರಿಕೆಟ್‌ ಬೆಟ್ಟಿಂಗ್‌ಗೆ ಸಂಬಂಧಿಸಿದ 8750 ವೆಬ್‌ಸೈಟ್‌ ಹಾಗೂ ಆ್ಯಪ್‌ಗಳ ಪತ್ತೆ ಹಚ್ಚಿದ್ದ ರಾಜ್ಯ ಸೈಬರ್‌ ಕಮಾಂಡ್‌ ಘಟಕದ (ಸಿಸಿಯು) ಅಧಿಕಾರಿಗಳು ಇದೀಗ ಈ ವೆಬ್‌ಸೈಟ್‌ ಹಾಗೂ ಆ್ಯಪ್‌ಗಳ ಮೂಲಕ ನೂರಾರು ಕೋಟಿ ರು. ವಹಿವಾಟು ನಡೆದಿರುವುದನ್ನು ಕಂಡು ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರದಾದ್ಯಂತ ಅಕ್ರಮ ಕ್ರಿಕೆಟ್‌ ಬೆಟ್ಟಿಂಗ್‌ಗೆ ಸಂಬಂಧಿಸಿದ 8750 ವೆಬ್‌ಸೈಟ್‌ ಹಾಗೂ ಆ್ಯಪ್‌ಗಳ ಪತ್ತೆ ಹಚ್ಚಿದ್ದ ರಾಜ್ಯ ಸೈಬರ್‌ ಕಮಾಂಡ್‌ ಘಟಕದ (ಸಿಸಿಯು) ಅಧಿಕಾರಿಗಳು ಇದೀಗ ಈ ವೆಬ್‌ಸೈಟ್‌ ಹಾಗೂ ಆ್ಯಪ್‌ಗಳ ಮೂಲಕ ನೂರಾರು ಕೋಟಿ ರು. ವಹಿವಾಟು ನಡೆದಿರುವುದನ್ನು ಕಂಡು ಹಿಡಿದಿದ್ದಾರೆ.

ಈ ಕುರಿತು ಸೈಬರ್ ಕಮಾಂಡ್ ಸೆಂಟರ್‌ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಚಂದ್ರಶೇಖರ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಅಕ್ರಮ ವೆಬೈಸೈಟ್‌ ಹಾಗೂ ಆ್ಯಪ್‌ಗಳ ಮೂಲಕ ನೂರಾರು ಕೋಟಿ ರು. ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವುಗಳ ಮೂಲ ಕಂಡುಹಿಡಿಯಲು 37 ಸೇವಾ ಪೂರೈಕೆದಾರರ ಮೂಲಕ 127 ವೆಬ್‌ಸೈಟ್‌ ಏಜೆನ್ಸಿಗಳಿಗೆ ಪತ್ರ ಬರೆದು ಶಾಶ್ವತವಾಗಿ ಬ್ಲಾಕ್‌ ಮಾಡುವಂತೆ ಸೂಚಿಸಲಾಗಿದೆ. ಜತೆಗೆ ಕೆಲವೊಂದು ಮಾಹಿತಿ ನೀಡುವಂತೆಯೂ ಅವರನ್ನು ಕೋರಲಾಗಿದೆ ಎಂದು ತಿಳಿಸಿದರು.

137 ವೆಬ್‌ಸೈಟ್ ಏಜೆನ್ಸಿಗಳಿಗೆ ಪತ್ರ:

ರಾಜ್ಯ ಸೈಬರ್‌ ಕಮಾಂಡ್‌ ಘಟಕವು ಇಂಡಿಯನ್ ಸೈಬರ್‌ ಕ್ರೈಂ ಕೋ-ಆರ್ಡಿನೇಷನ್ ಸೆಂಟರ್‌ (ಐ4ಸಿ) ಸಹಕಾರದೊಂದಿಗೆ ದೇಶಾದ್ಯಂತ ಅಕ್ರಮ ಬೆಟ್ಟಿಂಗ್ ಜಾಲತಾಣಗಳ ಯುಆರ್‌ಎಲ್‌ಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿತ್ತು. ಈ ವೇದಿಕೆಗಳನ್ನು ಬ್ಲಾಕ್ ಮಾಡಿದರೂ ಕ್ಷರ್ಣಾರ್ಧದಲ್ಲಿ ನಕಲಿ ಯುಆರ್‌ಎಲ್ ಸೃಷ್ಟಿಸಿ ಮಿರರ್ ಡೊಮೈನ್ ಹಾಗೂ ಸಬ್‌ಡೊಮೈನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದವು. ಆದ್ದರಿಂದ ಶಾಶ್ವತವಾಗಿ ಬೆಟ್ಟಿಂಗ್ ದಂಧೆ ನಡೆಸಲು ಅನುವು ಮಾಡಿಕೊಡದಿರಲು ಮೂಲ ಸೇವಾ ಪೂರೈಕೆದಾರರ ಮೂಲಕವೇ 137 ವೆಬ್‌ಸೈಟ್ ಏಜೆನ್ಸಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡಿ ಸಾವಿರಾರು ಜನರು ಹಣ ಕಳೆದುಕೊಂಡು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಹಣಕಾಸಿನ ಮುಗ್ಗಟ್ಟಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ದೇಶದೆಲ್ಲೆಡೆ ಪಸರಿಸಿದ್ದ ಬೆಟ್ಟಿಂಗ್ ವೇದಿಕೆಗಳನ್ನು ಗುರುತಿಸಿ ನಿಷ್ಕ್ರಿಯಗೊಳಿಸಲಾಗಿದೆ. ಇದುವರೆಗೂ ನೂರಾರು ಕೋಟಿ ಹಣದ ವಹಿವಾಟು ನಡೆದಿರುವ ಸಾಧ್ಯತೆಯಿದೆ. ವಂಚಕ ಕಂಪನಿಗಳ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಸೈಬರ್ ವಂಚನೆಗೂ ಆನ್‌ಲೈನ್‌ ಬೆಟ್ಟಿಂಗ್‌ಗೂ ಸಂಪರ್ಕ ಇರುವುದು ಗಮನಕ್ಕೆ ಬಂದಿದ್ದು ಇದರ ಬಗ್ಗೆಯೂ ತನಿಖೆ ನಡೆಸುತಿದ್ದೇವೆ ಎಂದರು.

ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜು ನಿಷೇಧಿಸಿ 2025ರಲ್ಲಿ ಸರ್ಕಾರ ಹೊಸ ಕಾಯ್ದೆ ತಂದಿತ್ತು. ಅದನ್ನು ಪ್ರಶ್ನಿಸಿ ಬೆಟ್ಟಿಂಗ್ ಕಂಪನಿಗಳು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದವು. ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಮೇ 27ರಂದು ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಇದರಿಂದಾಗಿ ಆನ್‌ಲೈನ್ ಬೆಟ್ಟಿಂಗ್ ದಂಧೆ ಪತ್ತೆ ಹಚ್ಚಲು ಪೂರಕವಾಯಿತು ಎಂದು ವಿವರಿಸಿದರು.

ಮೂಲ ವಂಚಕರ ಪತ್ತೆ ಸವಾಲು

ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್ ವಂಚನೆ ಬಗ್ಗೆ ಮೂರು ಹಂತದಲ್ಲಿ ತನಿಖೆ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಯುಆರ್‌ಎಲ್‌ಗಳ ಗುರುತಿಸಿ ಬ್ಲಾಕ್‌ ಮಾಡಿಸಲಾಗಿದೆ. ಜತೆಗೆ ಹೊಸದಾಗಿ ಬರುತ್ತಿರುವ ಯುಆರ್‌ಎಲ್‌ ಮೇಲೂ ನಿಗಾವಹಿಸಲಾಗಿದೆ. 2ನೇ ಹಂತದಲ್ಲಿ ಸೇವಾ ಪೂರೈಕೆದಾರರ ಮೂಲಕ ಪತ್ರ ಬರೆದು ಹೊಸ ವೆಬ್‌ಸೈಟ್‌ಗಳ ಬ್ಲಾಕ್‌ ಮಾಡಿಸಲಾಗಿದೆ. 3ನೇ ಹಂತದಲ್ಲಿ ಯಾರು ಬೆಟ್ಟಿಂಗ್ ಆ್ಯಪ್‌ ನಡೆಸುತ್ತಿದ್ದಾರೋ ಅವರ ಹಣಕಾಸಿನ ವಹಿವಾಟು ಪತ್ತೆ ಹಚ್ಚಲಾಗುತ್ತಿದೆ. ಇದರೊಂದಿಗೆ ವೆಬ್‌ ಹೋಸ್ಟಿಂಗ್‌ಗಳು ವಿದೇಶದಲ್ಲಿ ವ್ಯವಹಾರ ನಡೆಯುತ್ತಿರುವುದರಿಂದ ಮೂಲ ವಂಚಕರ ಪತ್ತೆ ಕಾರ್ಯದೊಡ್ಡ ಸವಾಲಾಗಿದೆ ಎಂದು ಎಡಿಜಿಪಿ ಚಂದ್ರಶೇಖರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಿಐಜಿ ಎಚ್‌.ಡಿ.ಆನಂದ್ ಕುಮಾರ್ ಸೇರಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಚಿವ ಸ್ಥಾನ ಸಿಗಲೆಂದು ಆಶಿಸಿ ವಿಶೇಷ ಪೂಜೆ
ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಿ: ಕೆ.ಆರ್.ನಂದಿನಿ