ಮಕ್ಕಳ ಕುಂಚದಲ್ಲಿ ಅರಳಿದ ನೂರಾರು ವರ್ಣಚಿತ್ರಗಳು

KannadaprabhaNewsNetwork | Published : Jan 5, 2025 1:34 AM

ಸಾರಾಂಶ

ಕಾರ್ಮೆಲ್ ಪ್ರೌಢಶಾಲೆಯ ೮, ೯ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳು ಈ ಎಲ್ಲಾ ಚಿತ್ರಗಳನ್ನು ರಚಿಸಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಕೆ.ಎಸ್.ವರ್ಷಾ ಬಿಡಿಸಿದ್ದ ೬೨ ವರ್ಣ ಚಿತ್ರಗಳು ಪ್ರದರ್ಶನದಲ್ಲಿ ಗಮನಸೆಳೆದವು. ಚಿತ್ರಕಲಾ ತರಬೇತುದಾರ ಪ್ರಶಾಂತ್ ಕಳೆದ ಮೂರು ವರ್ಷಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಾಲಾ ಹಂತದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರೌಢಶಾಲಾ ಮಕ್ಕಳು ಕುಂಚದಲ್ಲಿ ಅರಳಿಸಿದ ವರ್ಣಚಿತ್ರ ಪ್ರದರ್ಶನವನ್ನು ಕಾರ್ಮೆಲ್ ಕಾನ್ವೆಂಟ್‌ನಲ್ಲಿ ಶನಿವಾರ ಆಯೋಜಿಸಲಾಗಿತ್ತು. ಸುಮಾರು ೧೦೦ ಮಕ್ಕಳು ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ೭೨೦ ವರ್ಣಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಕಾರ್ಮೆಲ್ ಪ್ರೌಢಶಾಲೆಯ ೮, ೯ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳು ಈ ಎಲ್ಲಾ ಚಿತ್ರಗಳನ್ನು ರಚಿಸಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಕೆ.ಎಸ್.ವರ್ಷಾ ಬಿಡಿಸಿದ್ದ ೬೨ ವರ್ಣ ಚಿತ್ರಗಳು ಪ್ರದರ್ಶನದಲ್ಲಿ ಗಮನಸೆಳೆದವು.

ಚಿತ್ರಕಲಾ ತರಬೇತುದಾರ ಪ್ರಶಾಂತ್ ಕಳೆದ ಮೂರು ವರ್ಷಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿ ನೀಡುತ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಮಕ್ಕಳು ಬಿಡಿಸಿ ಸಂಗ್ರಹಿಸಿದ್ದ ವರ್ಣಚಿತ್ರಗಳನ್ನೆಲ್ಲಾ ಪ್ರದರ್ಶನಕ್ಕಿಡುವ ಆಲೋಚನೆ ಬಂದಿತು. ಇಂತಹದೊಂದು ಪ್ರಯೋಗವನ್ನು ಶಾಲಾ ಹಂತದಲ್ಲಿ ಯಾರೂ ಮಾಡಿರಲಿಲ್ಲದ ಕಾರಣ ಪ್ರಥಮ ಬಾರಿಗೆ ಮಕ್ಕಳ ಕಲಾ ಪ್ರೌಢಿಮೆಯನ್ನು ಪ್ರದರ್ಶನಕ್ಕಿಡಲು ನಿರ್ಧರಿಸಲಾಯಿತು.

ಐತಿಹಾಸಿಕ ಸ್ಥಳಗಳು, ಸ್ಮಾರಕಗಳು, ಕವಿಗಳು, ಸಿನಿಮಾನಟರು, ಕ್ರೀಡಾಪಟುಗಳು, ಸೌರಮಂಡಲ, ಕರಾಟೆ, ಪಕ್ಷಿಗಳು ಹೀಗೆ ವೈವಿಧ್ಯಮಯ ಚಿತ್ರಗಳು ನೋಡುಗರ ಗಮನಸೆಳೆಯುತ್ತಿದ್ದವು. ಎಲ್ಲರೂ ಚಿತ್ರಗಳ ಕೆಳಭಾಗದಲ್ಲಿ ತಮ್ಮ ಹೆಸರುಗಳನ್ನು ಸಹಿ ರೂಪದಲ್ಲಿ ದಾಖಲಿಸಿದ್ದರು. ಪೋಷಕರು ಮಕ್ಕಳಲ್ಲಿರುವ ಚಿತ್ರಕಲೆಯ ಬಗ್ಗೆ ಇರುವ ಆಸಕ್ತಿಯನ್ನು ಕಂಡು ಖುಷಿಪಟ್ಟರು. ತಮ್ಮ ಮಕ್ಕಳ ಚಿತ್ರಗಳನ್ನು ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.ಮೂರು ವರ್ಷದಿಂದ ಮಕ್ಕಳಿಗೆ ಚಿತ್ರ ಕಲೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವುದಕ್ಕೆ ಅವಕಾಶ ನೀಡಿದಂತಾಗಿತ್ತು. ಪ್ರೌಢಶಾಲಾ ಹಂತದ ನೂರು ಮಕ್ಕಳು ಸುಮಾರು ೭೨೦ ಚಿತ್ರಗಳನ್ನು ಬಿಡಿಸಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನ ಮತ್ತು ಆಕರ್ಷಣೀಯವಾಗಿವೆ. ಶಾಲಾ ಹಂತದಲ್ಲಿ ವರ್ಣಚಿತ್ರ ಪ್ರದರ್ಶನವನ್ನು ಮೊದಲ ಬಾರಿಗೆ ಶಾಲೆಯಲ್ಲಿ ಆಯೋಜಿಸಿರುವುದು ಸಂತಸ ತಂದಿದೆ.

- ಪ್ರಶಾಂತ್, ಚಿತ್ರಕಲಾ ತರಬೇತುದಾರ

ನನಗೆ ಚಿತ್ರಕಲೆಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಅದಕ್ಕೊಂದು ಸೂಕ್ತ ವೇದಿಕೆಯನ್ನು ಶಾಲೆಯಲ್ಲೇ ದೊರಕಿಸಿಕೊಟ್ಟರು. ನಾನು ರಚಿಸಿದ ೬೨ ಚಿತ್ರಗಳು ಪ್ರದರ್ಶನದಲ್ಲಿರುವುದು ಖುಷಿ ಕೊಟ್ಟಿದೆ. ಪ್ರಕೃತಿದತ್ತವಾದ ಚಿತ್ರಗಳು, ಐತಿಹಾಸಿಕ ಸ್ಮಾರಕಗಳನ್ನು ಬಿಡಿಸಿದ್ದೇನೆ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಆಸೆ ಇದೆ.

- ಕೆ.ಎಸ್.ವರ್ಷಾ, ೧೦ನೇ ತರಗತಿ ವಿದ್ಯಾರ್ಥಿನಿ

ಮೌಲ್ಯಗಳನ್ನು ತುಂಬುವುದೂ ಕೂಡ ಶಿಕ್ಷಣ: ಕೆ.ಮಹದೇವ

ಕನ್ನಡಪ್ರಭ ವಾರ್ತೆ ಮಂಡ್ಯ

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ನಾನಾ ರೀತಿಯ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಜೀವನದಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ನೆರವಾಗುತ್ತವೆ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಹದೇವ ಹೇಳಿದರು.

ನಗರದ ಕಾರ್ಮೆಲ್ ಪ್ರೌಢಶಾಲೆಯಲ್ಲಿ ನಡೆದ ವರ್ಣಚಿತ್ತಾರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಮಗು ಉನ್ನತಮಟ್ಟಕ್ಕೆ ಬರಬೇಕಾದರೆ ಆ ಮಗುವಿನಲ್ಲಿರುವ ಎಲ್ಲಾ ಪ್ರತಿಭೆಯನ್ನು ಹೊರಗೆ ತರಬೇಕು. ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲಾ ಶಿಕ್ಷಣವನ್ನೂ ನೀಡಬೇಕು. ಓದು-ಬರೆಯುವುದಷ್ಟೇ ಶಿಕ್ಷಣವಲ್ಲ. ಮೌಲ್ಯಗಳನ್ನು ತುಂಬುವುದೂ ಕೂಡ ಒಂದು ಶಿಕ್ಷಣ ಎಂದರು.

ಓದಿ ವಿದ್ಯಾವಂತರಾಗಿ ಉದ್ಯೋಗವನ್ನು ಸಂಪಾದಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಶಿಕ್ಷಣ ಅವಶ್ಯ. ಮಕ್ಕಳಲ್ಲಿರುವ ಚಿತ್ರಕಲೆ, ನೃತ್ಯ, ಸಂಗೀತ, ಹೀಗೆ ಹಲವಾರು ರೀತಿಯ ಕಲಾ ಪ್ರೌಢಿಮೆ ಸಂಪಾದಿಸಿದರೆ ಅದರಿಂದಲೂ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವುದಕ್ಕೆ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡಿ ಉನ್ನತ ಮಟ್ಟಕ್ಕೇರಬೇಕು ಎಂದರು.

ಶಿಕ್ಷಣಾಧಿಕಾರಿ ಚಂದ್ರಕಾಂತ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಉಮೇಶ್, ಶಿಕ್ಷಣ ಸಂಯೋಜನಾಧಿಕಾರಿ ಸ್ವಾಮಿ, ಕಾರ್ಮೆಲ್ ಕಾನ್ವೆಂಟ್ ಕಾಲೇಜಿನ ಮುಖ್ಯ ಶಿಕ್ಷಕಿ ಸಿಸ್ಟರ್ ಅಶ್ವಿನಿ, ಪ್ರೌಢಶಾಆಲಾ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಪೌಲಿನ್, ಸಂಗೀತ ಶಿಕ್ಷಕ ಸಂಗೀತ್‌ರಾಜ್ ಇದ್ದರು.

Share this article