ಜಠರಾಗ್ನಿ ನಮ್ಮ ವಶವಾದಾಗ ಸಹಜ ಉಪವಾಸ ಸಾಧ್ಯ । ಮನಸ್ಸಿಗೂ ಜಠರಾಗ್ನಿಗೂ ಇದೆ ಗಾಢವಾದ ಸಂಬಂಧ-ಮನಸ್ಸಿಗೆ ದುಃಖವಾದರೆ ಹಸಿವಾಗುವುದಿಲ್ಲಕನ್ನಡಪ್ರಭ ವಾರ್ತೆ ಗೋಕರ್ಣ
ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಉಪವಾಸದ ಕುರಿತಾಗಿ ಸೋಮವಾರ ಪ್ರವಚನ ಅನುಗ್ರಹಿಸಿದ ಶ್ರೀಗಳು, ಶರೀರದಲ್ಲಿ ಎಲ್ಲವೂ ಕೂಡ ನಮ್ಮ ಇಚ್ಛೆಗೆ ಸಹಕಾರಿಯಾಗುವಂತೆ ಭಗವಂತ ರಚಿಸಿದ್ದಾನೆ. ಆದರೆ ಶರೀರಕ್ಕೆ ಹೇಗೆ ಸಂವಹನ ಮಾಡಬೇಕು ಎಂಬ ವಿಷಯ ನಮಗೆ ತಿಳಿದಿರಬೇಕು. ಜಠರಾಗ್ನಿಗೆ ಹಿತ-ಮಿತ-ಮೇಧ್ಯಾಶನವನ್ನು ನೀಡುತ್ತಿದ್ದಾಗ ಅಗ್ನಿಯು ನಮ್ಮ ವಶವಾಗುತ್ತದೆ. ನಾವು ಹೇಳಿದಂತೆ ಕೇಳಲು ಆರಂಭಿಸುತ್ತದೆ. ನಾವು ಅದಕ್ಕೆ ಬೇಕಾಗಿರುವುದನ್ನು ಕೊಟ್ಟಾಗ ಅದು ನಾವು ಹೇಳಿದಂತೆ ಕೇಳುತ್ತದೆ. ಇದನ್ನು ಪ್ರಾಣಿ ಹಾಗೂ ಮನುಷ್ಯರಲ್ಲೂ ಕಾಣಬಹುದಾಗಿದ್ದು, ಇದು ದೇವತೆಗಳಿಗೂ ಅನ್ವಯವಾಗುತ್ತದೆ. ನಾಳೆ ಹಸಿವಾಗಬಾರದು ಎಂದು ವೈಶ್ವಾನರರೂಪಿ ಜಠರಾಗ್ನಿಗೆ ಸಮರ್ಪವಾದ ರೀತಿಯಲ್ಲಿ ಸಂದೇಶವನ್ನು ನೀಡಿದಾಗ ನಮಗೆ ಹಸಿವಿನ ಅರಿವು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಉಪ್ಪಿಟ್ಟಿನ ಕುರಿತಾಗಿ ಆಲೋಚಿಸುತ್ತಾ ಉಪವಾಸ ಮಾಡುವುದು ಸರಿಯಾದ ಕ್ರಮವಲ್ಲ. ದೇವರು ಕೊಟ್ಟಿರುವ ಮನಸ್ಸಿಗೆ ಅಪಾರವಾದ ಶಕ್ತಿಯಿದ್ದು, ನಾವು ಸರಿಯಾಗಿ ಸಂಕಲ್ಪಿಸಿದಾಗ ಆ ಕಾರ್ಯ ನೆರವೇರುತ್ತದೆ. ಸಂಕಲ್ಪ ಗಟ್ಟಿಯಿದ್ದಾಗ ಪ್ರಪಂಚವನ್ನೇ ಬದಲಾಯಿಸಬಹುದು. ದೃಢ ಸಂಕಲ್ಪ ಮಾಡಿದರೆ ಹಸಿವಾಗುವುದಿಲ್ಲ. ಮನಸ್ಸಿಗೆ ಆ ಶಕ್ತಿಯಿದ್ದು, ಇವೆಲ್ಲವೂ ಯಾವುದೋ ಕಾಲದ ಮಾತಲ್ಲ. ಇಂದಿಗೂ ಸಾಧಕರ ಅನುಭವದಲ್ಲಿ ಇರುವ ಸಂಗತಿಗಳು. ಯಾರು ಬೇಕಾದರೂ ಇದನ್ನು ಅನುಭವಿಸಿ ಪರೀಕ್ಷಿಸಬಹುದು. ಮನಸ್ಸಿಗೂ ಜಠರಾಗ್ನಿಗೆ ಗಾಢವಾದ ಸಂಬಂಧವಿದ್ದು, ಮನಸ್ಸಿಗೆ ದುಃಖವಾದರೆ ಹಸಿವಾಗುವುದಿಲ್ಲ. ಇದು ಅಗ್ನಿಯ ಮೇಲೆ ಮನಸ್ಸಿನ ಪರಿಣಾಮವನ್ನು ಸೂಚಿಸುತ್ತದೆ. ಇದನ್ನು ಆಧುನಿಕ ವಿಜ್ಞಾನವೂ ಒಪ್ಪಿದ್ದು, ರಷ್ಯಾದ ವಿಜ್ಞಾನಿ ಇವಾನ್ ಪಾವ್ಲೋವ್ ಈ ಬಗ್ಗೆ ಸುದೀರ್ಘ ಸಂಶೋಧನೆ ನಡೆಸಿದ್ದು, ಈ ಸಂಶೋಧನೆಗೆ ನೋಬೆಲ್ ಪುರಸ್ಕಾರವೂ ದೊರೆತಿದೆ ಎಂದು ಹೇಳಿದರು.ಸಿದ್ದಾಪುರ ಹವ್ಯಕ ಮಂಡಲದ ಅಂಬಾಗಿರಿ, ಹರೀಶಿ ಮಂಗಳೂರು, ಹಾರ್ಸಿಕಟ್ಟ, ಬಿದ್ರಕಾನ, ಸಿದ್ದಾಪುರ ವಲಯಗಳ ಪರವಾಗಿ ಸುರೇಶ ವೆಂಕಟ್ರಮಣ ಹೆಗಡೆ ದಂಪತಿ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸಿದ್ದಾಪುರ ಹವ್ಯಕ ಮಂಡಲದ ಸತೀಶ ಹೆಗಡೆ ಆಲ್ಮನೆ, ರಾಮಮೂರ್ತಿ ಹೆಗಡೆ ಗೋಳಗೋಡು, ಸೀತಾರಾಮ ಹೆಗಡೆ ಸುಳಗಾರು, ಕಲ್ಪನಾ ತಲವಾಟ, ಚಿದಂಬರ ಗೊಳಿಕೈ, ವೀಣಾ ಭಟ್ ಶಿರಸಿ, ಮನು ಪಟೇಲ್, ಪ್ರತಿಭಾ ಅಂಗಡಿ, ನವೀನ ಯಾಣ, ದರ್ಶನ ಹೆಗಡೆ ಕಂತನಳ್ಳಿ, ದಿನ ಪ್ರಧಾನ ರಾಮ ಬಾಲಕೃಷ್ಣ ಹೆಗಡೆ ಬಡಗಣಿ ಉಪಸ್ಥಿತರಿದ್ದರು.