ಕನ್ನಡಪ್ರಭ ವಾರ್ತೆ ಭಾಲ್ಕಿ
ನಿರಂತರ ಓದಿನ ಮೂಲಕ ಹೆಚ್ಚೆಚ್ಚು ಜ್ಞಾನ ಸಂಪಾದಿಸಬೇಕು ಎಂಬ ಹಸಿವು ವಿದ್ಯಾರ್ಥಿಗಳ ಸಾಧನೆಗೆ ಪ್ರೇರೇಪಿಸುತ್ತದೆ ಎಂದು ಬೆಂಗಳೂರಿನ ಕರ್ನಾಟಕ ಔಷಧ ಮತ್ತು ವಿಜ್ಞಾನ ಪರಿಷತ್‌ನ ನೋಂದಣಾಧಿಕಾರಿ ಕ್ರಾಂತಿಕುಮಾರ ಸಿರ್ಸೆ ಹೇಳಿದರು.ಅವರು ಇಲ್ಲಿಯ ಭಾಲ್ಕೇಶ್ವರ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾಧಕರಿಗೆ ಸನ್ಮಾನಿ ಮಾತನಾಡಿ, ಸಾಧನೆ ಎಂಬುವದು ಸಾಧಕರ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆಗೆ ಬೇಕಿರುವುದು ಆತ್ಮವಿಶ್ವಾಸ, ಅಚಲ ನಂಬಿಕೆ ಹಾಗಾಗಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಪ್ರತಿದಿನ ಶಿಕ್ಷಕರ ಪಾಠ ಬೋಧನೆಗಳನ್ನು ಶ್ರದ್ಧೆ, ಏಕಾಗ್ರತೆ, ಆಸಕ್ತಿಯಿಂದ ಆಲಿಸಬೇಕು ಎಂದು ತಿಳಿಸಿದರು.
ಉದ್ಯಮಿ ವಿಜಯಕುಮಾರ ಸಜ್ಜನ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ವಿದ್ಯಾರ್ಥಿಗಳ ಏಳಿಗೆಯೇ ಶಿಕ್ಷಕರ ಸಾಧನೆ ಎಂಬುವದನ್ನು ಅರಿಯಬೇಕು. ಭಾಲ್ಕೇಶ್ವರ ಪ್ರೌಢ ಶಾಲೆಯಲ್ಲಿ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸ್ಥೆಯ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಅಭ್ಯುದಯವೇ ಶಾಲೆಯ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಶಿವಕುಮಾರ ಪಾಟೀಲ್, ಪಾಲಕರ ಪ್ರತಿನಿಧಿ ಶಿವಶಂಕರ ಶೀಲವಂತ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ , ಶಾಲೆಗೆ ಪ್ರಥಮ ಸ್ಥಾನ ಪಡೆದ ವೈಷ್ಣವಿ ಶಿವಶಂಕರ (625ಕ್ಕೆ 619) ಪ್ರೇಮ ಸಂತೋಷ (625ಕ್ಕೆ 606 ಅಂಕ) ದ್ವಿತೀಯ ಸ್ಥಾನ ಗಳಿಸಿದ ಅವರಿಗೆ ತಲಾ ಐದು ಸಾವಿರ ರುಪಾಯಿಗಳ ನಗದು ಬಹುಮಾನ ನೀಡಿ ಸನ್ಮಾನಿಸಿ ಕ್ರಾಂತಿಕುಮಾರ ಸಿರ್ಸೆ ಸನ್ಮಾನಿಸಿದರು.ಉದ್ಯಮಿ ವಿಜಯಕುಮಾರ ಸಜ್ಜನ ಅವರು ಸಾಧಕ ವಿದ್ಯಾರ್ಥಿಗಳಿಗೆ ಕ್ರಮವಾಗಿ 5511, 2500 ರೂಪಾಯಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಪ್ರಮುಖರಾದ ಶಿವಶರಣಯ್ಯ ಸ್ವಾಮಿ, ಗೋವಿಂದರಾವ್ ಭಾಲ್ಕೆ, ವಿಜಯಕುಮಾರ ಭುಸಗುಂಡೆ, ಸಂತೋಷ ದೇವಪ್ಪ, ವಿಜಯಕುಮಾರ ಕುಂಬಾರ, ಕುಪೇಂದ್ರ ಜಗಶೆಟ್ಟೆ, ಸಿದ್ರಾಮಪ್ಪ ಚಳಕಾಪೂರೆ, ಮುಖ್ಯಶಿಕ್ಷಕ ಬಾಲಾಜಿ ಬಿರಾದಾರ, ಸುನಿತಾ ಸಂಗೋಳಗೆ, ಶಿವಕಾಂತ, ಚೈತನ್ಯ ಇದ್ದರು.