ರಸ್ತೆ ಅಪಘಾತ ನಮ್ಮ ದೇಶ ಕಾಡುತ್ತಿರುವ ದೊಡ್ಡ ಪಿಡುಗಾಗಿದೆ

KannadaprabhaNewsNetwork | Published : Feb 9, 2025 1:15 AM

ಸಾರಾಂಶ

ದೇಶಾದ್ಯಂತ ಪ್ರತಿ ವರ್ಷ 2 ಲಕ್ಷ ಮಂದಿ ರಸ್ತೆ ಅಪಘಾತದಿಂದ ಮರಣ ಹೊಂದುತ್ತಿದ್ದರೆ, 2 ಲಕ್ಷಕ್ಕೂ ಅಧಿಕ ಮಂದಿ ಶಾಶ್ವತ ಅಂಗವಿಕಲರಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸೂರು ರಸ್ತೆ ಅಪಘಾತಗಳು ನಮ್ಮ ದೇಶವನ್ನು ಕಾಡುತ್ತಿರುವ ದೊಡ್ಡ ಪಿಡುಗಾಗಿದೆ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಹೊನ್ನೇಗೌಡ ಅಭಿಪ್ರಾಯಪಟ್ಟರು.ಸಾರಿಗೆ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅರಿವು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಾದ್ಯಂತ ಪ್ರತಿ ವರ್ಷ 2 ಲಕ್ಷ ಮಂದಿ ರಸ್ತೆ ಅಪಘಾತದಿಂದ ಮರಣ ಹೊಂದುತ್ತಿದ್ದರೆ, 2 ಲಕ್ಷಕ್ಕೂ ಅಧಿಕ ಮಂದಿ ಶಾಶ್ವತ ಅಂಗವಿಕಲರಾಗುತ್ತಿದ್ದಾರೆ. ಹಾಗಾದರೆ ರಸ್ತೆ ಅಪಘಾತಗಳು ಏಕಾಗುತ್ತಿವೆ ಎಂದರೆ ವಾಹನ ಚಾಲಕನ ನಿರ್ಲಕ್ಷ್ಯ, ಸಂಚಾರಿ ನಿಯಮಗಳ ಉಲ್ಲಂಘನೆ, ಮೊಬೈಲ್ ಬಳಕೆ, ಮದ್ಯಪಾನ ಮಾಡಿ ಚಾಲನೆ, ಓವರ ಟೇಕ್, ಏಕಾಗ್ರತೆಯಿಂದ ಚಾಲನೆ ಮಾಡದಿರುವುದು ಮುಂತಾದ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ ಎಂದರು.ಸರ್ಕಾರಗಳು ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಲು ನಿರ್ದೇಶಿಸಿದ್ದರೆ ನಾಗರಿಕರು ಅದನ್ನು ಪಾಲಿಸುತ್ತಿಲ್ಲ. ಆಟೋ ಚಾಲಕರು ಶಾಲಾ ಮಕ್ಕಳನ್ನು ಕರೆದೊಯ್ಯುವಂತಿಲ್ಲ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯಕೂಡದು ಎಂದು ತಿಳಿಸಿದ್ದರೂ, ಎಲ್ಲ ನಿಯಮಗಳ ಉಲ್ಲಂಘನೆಯೇ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಬೇಸರಿಸಿದರು.ಸಂವಿಧಾನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ನಂತರ ಜಾಥಾವು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.ಚಾಲನ ತರಬೇತಿ ಶಾಲೆಗಳ ಪ್ರಾಂಶುಪಾಲರು, ಸಿಬ್ಬಂದಿ, ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿವಿಧ ವಾಹನ ಕಂಪನಿಗಳ ಮಳಿಗೆ ಮಾಲೀಕರು ಪ್ಲೆಕ್‌ ಕಾರ್ಡ್ ಹಿಡಿದು ಸಂಚಾರ ನಿಯಮಗಳ ಪಾಲನೆಯ ವಿವಿಧ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನಸೆಳೆದರು.ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆ ಕುರಿತಾದ ಕರಪತ್ರವನ್ನು ಹಂಚಲಾಯಿತು. ಹಿರಿಯ ಮೋಟಾರ್ ವಾಹನ ನಿರೀಕ್ಷಕ ಮಹೇಶ್, ಮೋಟಾರ್ ವಾಹನ ನಿರೀಕ್ಷಕ ತ್ಯಾಗರಾಜು, ಚಾಲನ ತರಬೇತಿ ಸಂಸ್ಥೆಗಳ ಮಾಲೀಕರ ಸಂಘದ ಅಧ್ಯಕ್ಷ ರವಿ, ಕಾರ್ಯದರ್ಶಿ ಸೋಮು, ಸಾರಿಗೆ ಇಲಾಖೆ ಸಿಬ್ಬಂದಿ ಅನಿಲ್, ಶಾರದಮ್ಮ, ರಾಮಪ್ರಸಾದ್, ರಾಘವೇಂದ್ರ, ಆಟೋ, ಕಾರ್ ಚಾಲಕರು ಇದ್ದರು.

Share this article