ಮುಂಡರಗಿ: ಗಂಡನನ್ನು ಹೆಂಡತಿ, ಹೆಂಡತಿಯನ್ನು ಗಂಡ ಪರಸ್ಪರವಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಜೀವನದಲ್ಲಿ ಏನೇ ಕಷ್ಟ-ಸುಖ ಬಂದರೂ ಪತಿ ಪತ್ನಿಯರಿಬ್ಬರೂ ಸಮಭಾವದಿಂದ ಬಾಳಬೇಕು ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ನೂತನ ದಂಪತಿಗಳು ನಿಮ್ಮ ಮದುವೆ ನೆನಪಿಗೋಸ್ಕರ ಎಲ್ಲರೂ ಒಂದೊಂದು ಗಿಡ ಬೆಳೆಸಬೇಕು. ಗ್ರಹಸ್ಥ ಜೀವನದಲ್ಲಿ ಪರೋಪಕಾರ, ಸಹಾಯ, ಸಹಕಾರ, ಕಾಯಕ ಮಾಡಿ ಉಣ್ಣುವ ಸಂಸ್ಕೃತಿ ಸೇರಿದಂತೆ ಎಲ್ಲವೂ ಇರಲೇಕು. ಹೆಂಡತಿ ಗಂಡನ ತಂದೆ-ತಾಯಿಯನ್ನು ಗಂಡ ಹೆಂಡತಿಯ ತಂದೆ ತಾಯಿಯನ್ನು ಪರಸ್ಪರ ಚೆನ್ನಾಗಿ ನೋಡಿಕೊಳ್ಳಬೇಕು. ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವುದರಿಂದ ನವದಂಪತಿಗಳಿಗೆ ಸಾಕಷ್ಟು ಹಣಕಾಸಿನ ಹೊರೆ ಕಡಿಮೆಯಾದಂತಾಗುತ್ತದೆ ಎಂದರು.
ಲಿಂಗನಾಯಕನ ಹಳ್ಳಿ ಜಂಗಮಕ್ಷೇತ್ರದ ಜ. ಚನ್ನವೀರ ಮಹಾಸ್ವಾಮೀಜಿ ನೇತೃತ್ವವಹಿಸಿಕೊಂಡು ಮಾತನಾಡಿ, ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಮಠ ಈ ನಾಡಿನ ವೀರಶೈವ-ಲಿಂಗಾಯತ ಮಠಗಳಲ್ಲಿ ತನ್ನದೇಯಾದ ವಿಶೇಷತೆ ಹೊಂದಿರುವಂತದ್ದು. ಇಂದಿನ ಪೂಜ್ಯರ ಆಡಳಿತಾವಧಿಯಲ್ಲಿ ಶ್ರೀಮಠ ಸಾಕಷ್ಟು ಬೆಳೆದು ನಿಂತಿದೆ. ಕೇವಲ ಯಾತ್ರಾ ಮಹೋತ್ಸವ ಮಾಡದೇ ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಪ್ರತಿ ವರ್ಷ ಸಾಮೂಹಿಕ ವಿವಾಹ ಮಾಡುತ್ತಾ ಬರುತ್ತಿದ್ದಾರೆ. ಇಂತಹ ಶ್ರೀಗಳನ್ನು ಪಡೆದ ನಾಡಿನ ಭಕ್ತರು ಪುಣ್ಯವಂತರು ಎಂದರು.ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಬರದ ನಾಡಿನಲ್ಲಿ ಮುಂಡರಗಿ ಶ್ರೀಗಳು ಅನ್ನದಾನದ ಜತೆಗೆ ವಿದ್ಯಾದಾನ ಮಾಡುತ್ತಾ ಮುಂಡರಗಿ ಕೀರ್ತಿ ಬಾನೆತ್ತರಕ್ಕೆ ಹೆಚ್ಚಿಸಿದ್ದಾರೆ. ನಾಡಿನಾದ್ಯಂತ ಸುಮಾರು 33 ಶಿಕ್ಷಣ ಸಂಸ್ಥೆ ತೆರೆದು ಎಲ್ಲೆಡೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ.ಅನ್ನದಾನೀಶ್ವರ ಯಾತ್ರಾ ಮಹೋತ್ಸವಕ್ಕೆ ಭಕ್ತರು ತನು, ಮನ. ಧನದಿಂದ ಸಹಾಯ, ಸಹಕಾರ ಮಾಡುತ್ತಿದ್ದು, ಇಲ್ಲಿನ ಯುವಕರು ಟೊಂಕ ಕಟ್ಟಿಕೊಂಡು ನಿಂತು ಸೇವೆ ಮಾಡುವುದರಿಂದ ಯಾತ್ರಾ ಮಹೋತ್ಸವ ಯಶಸ್ವಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ, ಹಿರೇಮಲ್ಲನಕೇರಿ ಸ್ವಾಮೀಜಿ, ಕನಕಗಿರಿಯ ಚೆನ್ನಮಲ್ಲ ಸ್ವಾಮೀಜಿ, ಶಿವಾನಂದ ದೇವರು, ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ್, ಯಾತ್ರಾ ಕಮೀಟಿ ಅಧ್ಯಕ್ಷ ವಿ.ಜೆ. ಹಿರೇಮಠ, ದೇವು ಹಡಪದ, ಶಿವು ವಾಲಿಕಾರ, ಡಾ.ಬಿ.ಜಿ. ಜವಳಿ, ಅನುಪಕುಮಾರ ಹಂಚಿನಾಳ, ರಾಮು ಕಲಾಲ, ಮಂಜುನಾಥ ಶಿವಶೆಟ್ಟರ್, ಕೈಲಾಸ ಹಿರೇಮಠ, ವಿರೇಶ ಸಜ್ಜನರ, ವಿಶ್ವನಾಥ ಗಡ್ಡದ, ರವೀಂದ್ರಗೌಡ ಪಾಟೀಲ, ರಾಘವೇಂದ್ರ ಪಟಗೆ, ನಾಗರಾಜ ಗುಡಿಮನಿ, ಮುತ್ತು ಅಳವಂಡಿ, ರವಿಕುಮಾರ ಕುಂಬಾರ, ಮಂಜುನಾಥ ಕಾಲವಾಡ, ವಿಶ್ವನಾಥ ಗಡ್ದದ, ಜಗದೀಶ ಹೊರಡಿ, ಆಕಾಶ ಹಂಚಿನಾಳ, ಸಿದ್ದು ದೇಸಾಯಿ, ಮಂಜು ಮುಧೋಳ, ಕುಮಾರ ಬನ್ನಿಕೊಪ್ಪ, ಪ್ರಶಾಂತಗೌಡ ಗುಡದಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್.ಎಸ್. ಇನಾಮತಿ ನಿರೂಪಿಸಿ ವಂದಿದರು.