ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬಳ್ಳಾರಿ ಜಿಲ್ಲೆ ಇಂದಿರಾ ನಗರದ ಹಿಂದೂ ಯುವಕ ಮಹೇಂದ್ರ ಹಾಗೂ ಮುಸ್ಲಿಂ ಮಹಿಳೆ ಹುಸೇನಿ ಇಬ್ಬರು ಕುಟುಂಬಸ್ಥರ ವಿರೋಧದ ನಡುವೆ ಪ್ರೇಮ ವಿವಾಹವಾಗಿದ್ದರು. ನಂತರ ಊರು ತೊರೆದು ಇರು ಮಂಡ್ಯಕ್ಕೆ ಆಗಮಿಸಿ ನಗರದ ರೈಲ್ವೆ ಗೇಟ್ ಬಳಿ ಬಿಡಾರ ಹೂಡಿದ್ದರು.
ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಬಳಿಯ ಖಾಲಿ ಮಂಟಪವೊಂದರಲ್ಲಿ ಭಾನುವಾರ ರಾತ್ರಿ ಆಶ್ರಯ ಪಡೆದಿದ್ದರು. ದಂಪತಿಯ ಹುಸೇನಿಗೆ ಸೋಮವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಹೆಣ್ಣು ಮಗುವಿನ ಜನನವಾಗಿದೆ.ಪತ್ನಿ ಹುಸೇನಿಗೆ ಸೋಮವಾರ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದೆ. ಕತ್ತಲಿನ ವೇಳೆ ದಿಕ್ಕು ಕಾಣದೆ ಪತಿ ಮಹೇಂದ್ರನೇ ಹೆರಿಗೆ ಪ್ರಕ್ರಿಯೆ ನಡೆಸಿದ್ದಾನೆ. ನಂತರ ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಸದ್ಯ ಮಗು ಮತ್ತು ಬಾಣಂತಿ ಆರೋಗ್ಯವಾಗಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಟ್ಡಿರುವುದಾಗಿ ತಿಳಿದು ಬಂದಿದೆ. ದಂಪತಿಯನ್ನು ಕಂಡ ಸಾರ್ವಜನಿಕರು ಮರುಕ ವ್ಯಕ್ತಪಡಿಸಿದ್ದಾರೆ.