ಮಾರಾಕಾಯುಧಗಳಿಂದ ಕೊಚ್ಚಿ ಪತ್ನಿಯ ಕೊಲೆ ಮಾಡಿದ ಪತಿ

KannadaprabhaNewsNetwork |  
Published : Oct 14, 2026, 01:15 AM IST
ಕೊಲೆ  | Kannada Prabha

ಸಾರಾಂಶ

ಹಿಂಬಾಲಿಸಿಕೊಂಡು ಬಂದ ಆಕೆಯ ಮೊದಲ ಪತಿ ವೆಂಕಟರೆಡ್ಡಿ ಅಂಜನಿ ಬಡಾವಣೆಯ ಸ್ಟೋನ್ ಬಿಲ್ಡಿಂಗ್ ಬಳಿ ಮಾರಾಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು. ಬಳಿಕ ಆತನನ್ನು ಬಂಧಿಸಲಾಗಿದೆ.

ಮಗಳ ಎದುರೇ ತಾಯಿಯ ಹತ್ಯೆ । ಮೊದಲ ಪತಿಯಿಂದ ಕೃತ್ಯ । ಎರಡನೇ ಮದುವೆಯಾದ್ದರಿಂದ ಕೊಲೆ ಶಂಕೆ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲೇ ಮಾರಾಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಅಂಜನಿ ಬಡಾವಣೆಯ ಬಳಿ ನಡೆದಿದೆ.

ನಗರದ ಪಾಲಿಟೆಕ್ನಿಕ್ ಮೈದಾನದಲ್ಲಿ ಹಮ್ಮಿಕೊಂಡಿರುವ ನವರಾತ್ರಿ ದುರ್ಗಾ ಮಹೋತ್ಸವಕ್ಕೆ ಭೇಟಿ ನೀಡಿ ಮಗಳು ವಿಷ್ಣುಪ್ರಿಯಾ ಜೊತೆಗೆ ಸೇರಿ ತರಕಾರಿ ಖರೀದಿಸಿ ಮನೆಗೆ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ಸುಮಿತ್ರಮ್ಮ (36) ಅವರನ್ನು ಹಿಂಬಾಲಿಸಿಕೊಂಡು ಬಂದ ಆಕೆಯ ಮೊದಲ ಪತಿ ವೆಂಕಟರೆಡ್ಡಿ ಅಂಜನಿ ಬಡಾವಣೆಯ ಸ್ಟೋನ್ ಬಿಲ್ಡಿಂಗ್ ಬಳಿ ಮಾರಾಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು. ಬಳಿಕ ಆತನನ್ನು ಬಂಧಿಸಲಾಗಿದೆ.

ಮೃತ ಸುಮಿತ್ರಮ್ಮ ಮೂಲತಃ ಶ್ರೀನಿವಾಸಪುರ ತಾಲೂಕಿನ ಬೈನಹಳ್ಳಿ ಗ್ರಾಮದವರಾಗಿದ್ದು, 12 ವರ್ಷಗಳ ಹಿಂದೆ ತಾಲೂಕಿನ ಕಾಪ್ಪಲ್ಲಿಯ ವೆಂಕಟರೆಡ್ಡಿ ಜೊತೆ ವಿವಾಹವಾಗಿತ್ತೆಂದು ತಿಳಿದು ಬಂದಿದ್ದು, ದಂಪತಿಗೆ ವಿಷ್ಣುಪ್ರಿಯಾ ಎಂಬ 11 ವರ್ಷದ ಮಗಳಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದು ವರ್ಷದ ಹಿಂದೆ ಗಂಡನನ್ನು ಬಿಟ್ಟು ಬಂದು ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ಬಾಕಿ ಇರುವಾಗಲೇ ಅದೇ ಗ್ರಾಮದ ರಮೇಶ್ ಎಂಬುವರನ್ನು ರಹಸ್ಯವಾಗಿ ಎರಡನೇ ಮದುವೆಯಾಗಿ ಮಗಳೊಂದಿಗೆ ಜೀವನ ನಡೆಸುತ್ತಿದ್ದರೆಂದು ತಿಳಿದುಬಂದಿದೆ.

ಈ ವಿಚಾರವಾಗಿ ಸುಮಿತ್ರಮ್ಮ ಮತ್ತು ವೆಂಕಟರೆಡ್ಡಿ ನಡುವೆ ಆಗಾಗೇ ಕಲಹ ನಡೆಯುತ್ತಿದ್ದು, ಕಟ್ಟಿಕೊಂಡ ಪತ್ನಿ ತನ್ನನ್ನು ಬಿಟ್ಟು ಮತ್ತೊಬ್ಬರನ್ನು ಮದುವೆಯಾಗಿದ್ದಾಳೆಂದು ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸಂಜೆಯಿಂದಲೇ ಸುಮಿತ್ರಮ್ಮ ಅವರನ್ನು ಹಿಂಬಾಲಿಸುತ್ತಿದ್ದರಿಂದ ಮೊದಲೇ ಕೊಲೆಗೆ ಸಂಚು ರೂಪಿಸಿದ್ದನು ಎನ್ನಲಾಗಿದೆ.

ನಡುರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದ ಆಕೆಯನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದೆ ಬಂದಿರಲಿಲ್ಲ. ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ, ಕೊಲೆ ನಡೆದು 1 ಗಂಟೆಯಾದರೂ ಸ್ಥಳಕ್ಕೆ ಆ್ಯಂಬುಲೆನ್ಸ್ ಬರಲಿಲ್ಲವೆಂದು ಆಟೋದಲ್ಲಿ ಸಾಗಿಸಲು ಮುಂದಾದಾಗ ಆ್ಯಂಬುಲೆನ್ಸ್ ಬಂದಿದ್ದು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಘಟನೆ ನಂತರ ಸ್ಥಳಕ್ಕೆ ಎಸ್‌ಪಿ ಪದ್ಮಿನಿ ಸಾಹು ಮತ್ತು ಡಿವೈಎಸ್‌ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಚಿತ್ರಶೀರ್ಷಿಕೆ: ಮೃತಳಾದ ಸುಮಿತ್ರಮ್ಮಳ ಭಾವಚಿತ್ರ ಮತ್ತು ಕೊಲೆ ಮಾಡಿದ ಪತಿ ವೆಂಕಟರೆಡ್ಡಿರ ಭಾವಚಿತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ.ಬಿಮೋಲ್ ವಿರುದ್ಧ ಬಿಜೆಪಿ ಹೋರಾಟ
ಎನ್‌ಡಿಎ ಅಭ್ಯರ್ಥಿ ರಂಗನಾಥ್ ಬೆಂಬಲಿಸಲು ಇ.ಕೃಷ್ಣಪ್ಪ ಕರೆ