ಪತಿಯ ಗಲಾಟೆ, ಶಿಕ್ಷಕಿ ವರ್ಗಾವಣೆಗೆ ಗ್ರಾಮಸ್ಥರ ಆಗ್ರಹ

KannadaprabhaNewsNetwork | Published : Sep 1, 2024 1:52 AM

ಸಾರಾಂಶ

ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಗೆ ಶಾಲೆಯ ಶಿಕ್ಷಕಿಯ ಪತಿ ಬಂದು ಗಲಾಟೆ ಮಾಡಿ ಗ್ರಾಮಸ್ಥರಿಗೆ ಮತ್ತು ಶಾಲಾ ಅಭಿವೃದ್ಧಿ ಮಂಡಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಶುಕ್ರವಾರ ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ನಡೆದಿದೆ.

ಶಿಗ್ಗಾಂವಿ:ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಗೆ ಶಾಲೆಯ ಶಿಕ್ಷಕಿಯ ಪತಿ ಬಂದು ಗಲಾಟೆ ಮಾಡಿ ಗ್ರಾಮಸ್ಥರಿಗೆ ಮತ್ತು ಶಾಲಾ ಅಭಿವೃದ್ಧಿ ಮಂಡಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಶುಕ್ರವಾರ ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ನಡೆದಿದೆ.ಕಳೆದ ವರ್ಷ ಹಿರೇಮಲ್ಲೂರ ಗ್ರಾಮದ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿದ ಪ್ರೌಢಶಾಲೆಯನ್ನಾಗಿ ಮಾಡಲಾಗಿದೆ. ಪ್ರೌಢಶಾಲೆಗೆ ಹೊಸ ಮುಖ್ಯೋಪಾಧ್ಯಾಯರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯಿನಿಯಾಗಿದ್ದ ಶೈಲಜಾ ಟಿ. ಶಾಲೆಯ ಸಹ ಶಿಕ್ಷಕರ ಜತೆಗೆ ಉತ್ತಮ ಬಾಂಧವ್ಯ ಹೊಂದಿಲ್ಲ. ಜತೆಗೆ ವಿದ್ಯಾರ್ಥಿಗಳಿಗೆ ವಿನಾಕಾರಣ ಬೈಯ್ಯುತ್ತಾರೆ ಎಂಬ ಆರೋಪವಿದೆ. ಶಾಲೆಯ ವಾತಾವರಣ ಹದಗೆಟ್ಟಿದೆ. ಗ್ರಾಮಸ್ಥರಲ್ಲೂ ಗೊಂದಲ ಏರ್ಪಟ್ಟಿದೆ. ಹೀಗಾಗಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆ. ೨೯ರಂದು ಪಾಲಕರ ಸಭೆ ನಡೆಸಲಾಗಿತ್ತು. ವಿದ್ಯಾರ್ಥಿಗಳ ಕಲಿಕೆಗೆ ಒತ್ತು ನೀಡುವಂತೆ ಶಿಕ್ಷಕರಿಗೆ ಸೂಚಿಸಲಾಗಿತ್ತು. ಜತೆಗೆ ಸಹಕಾರ ನೀಡುವಂತೆ ಕೋರಲಾಗಿತ್ತು.ಗುರುವಾರ ನಡೆದ ಸಭೆಯಲ್ಲಿ ಮುಖ್ಯೋಪಾಧ್ಯಾಯಿನಿ ಶೈಲಜಾ ಟಿ. ಅವರ ಪತಿ ಶಾಲೆಗೆ ಬಂದು ಪಾಲಕರು, ಎಸ್‌ಡಿಎಂಸಿ, ಗ್ರಾಪಂ ಸದಸ್ಯರೊಂದಿಗೆ ಕ್ಯಾತೆ ತೆಗೆದಿದ್ದು, ಸಮಸ್ಯೆ ಬಗೆಹರಿಸಲು ನಡೆಸಬೇಕಿದ್ದ ಸಭೆ ಮತ್ತಷ್ಟು ಬಿಗಡಾಯಿಸಿ, ಕೆಲಸಮಯ ಗ್ರಾಮಸ್ಥರು ಮತ್ತು ಮುಖ್ಯೋಪಾಧ್ಯಾಯಿನಿ ಪತಿಯೊಂದಿಗೆ ವಾಗ್ವಾದ ನಡೆದು ಗೊಂದಲಮಯ ವಾತಾವರಣ ಉಂಟಾಯಿತು.ಶಾಲೆಗೆ ಸಂಬಂಧವಿಲ್ಲದ ವ್ಯಕ್ತಿಗೆ ಶಾಲಾ ಆವರಣದಿಂದ ಹೊರನಡೆಯುವಂತೆ ಗ್ರಾಮಸ್ಥರು ಹೇಳಿದರೂ ಶಾಲಾ ಅಭಿವೃದ್ಧಿ ಮಂಡಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಪಂ ಸದಸ್ಯರು, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿರುವ ಶಿಕ್ಷಕಿಯನ್ನು ಗ್ರಾಮದ ಶಾಲೆಯಿಂದ ಬೇರೆಡೆಗೆ ವರ್ಗಾಯಿಸುವಂತೆ ಮನವಿ ಅರ್ಪಿಸಿದರು.ಶಿಕ್ಷಣ ಇಲಾಖೆಯ ಅಧೀಕ್ಷಕ ರಾಘವೇಂದ್ರ ಬೊಂಗಾಳೆ ಮನವಿ ಸ್ವೀಕರಿಸಿದರು. ಶಿಕ್ಷಣ ಇಲಾಖೆಯ ಮ್ಯಾನೇಜರ್‌ ಎಸ್‌.ಎಚ್. ಹೆಬಸೂರ, ಶಿಕ್ಷಣ ಸಂಯೋಜಕ ಉಮೇಶ ಎಸ್.ಆರ್., ಗ್ರಾಪಂ ಅಧ್ಯಕ್ಷ ರಾಮನಗೌಡ ಕರಿಗೌಡ್ರ, ಫಕ್ಕಿರೇಶ ವಾಲ್ಮೀಕಿ, ಇಮಾಮ್‌ಸಾಬ್‌ ನದಾಫ, ಈಶ್ವರಗೌಡ ಹುತ್ತನಗೌಡ್ರ, ಲಕ್ಷ್ಮಣ ಮಡಿವಾಳರ, ಅಶೋಕ ಬುದನೂರ, ಸಂತೋಷ ದೊಡ್ಡಮನಿ, ಮೌಲಾಸಾಬ ಕಟಗಿ, ಪ್ರಕಾಶ ಕ್ಯಾಲಕೊಂಡ, ರಸೂಲ್‌ಸಾಬ್‌ ನದಾಫ, ಶಿವರಾಜ ಬೋರಣ್ಣವರ, ಮಂಜು ಬೂದನೂರ, ನೀಲಪ್ಪಾ ಹರಿಜನ ಇತರರಿದ್ದರು.

Share this article