ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಾಂಪ್ರದಾಯಿಕ ಆಚರಣೆಗಳೊಂದಿಗೆ, ಪಟಾಕಿ ಬಾಣ ಬಿರುಸುಗಳ ಸದ್ದಿನೊಂದಿಗೆ ವಿವಿಧ ದೇವಾಲಯ, ಐನ್ ಮನೆ, ಕೊಡವ ಸಮಾಜಗಳಲ್ಲಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕಕ್ಕಬ್ಬೆಯ ಶ್ರೀಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು. ಬಳಿಕ ನಾಡಿನಲ್ಲೆಡೆ ಬತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿತು.ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಪೊಂಗೇರ, ಕಣಿಯಂಡ, ಕೋಳೆಯಂಡ, ಕಲಿಯಂಡ, ಐರೀರ, ಐಕೊಳಂಡ, ಬೊಳ್ಳಿನಮ್ಮಂಡ ಸೇರಿದಂತೆ ಅಮ್ಮಂಗೇರಿಯವರು ಹಾಗೂ ಊರ ಪರವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಶುಭ ಸಂಕೇತವಾಗಿ ಆಕಾಶದ ಕಡೆಗೆ ಗುಂಡು ಹಾರಿಸಿ ಉದ್ಘೋಷಗಳು ಮುಗಿಲು ಮುಟ್ಟಿದವು. ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಬಂದು ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯದ ಅರ್ಚಕರಿಗೆ ತೆನೆಗಳನ್ನು ಹಸ್ತಾಂತರಿಸಿದರು ಅವರು ತೆನೆಗಳನ್ನು ದೇವಾಲಯದ ನಮಸ್ಕಾರ ಮಂಟಪದಲ್ಲಿರಿಸಿ ಅರ್ಚಕರಾದ ಕುಶ ಭಟ್, ಪ್ರಸಾದ್ ಬತ್ತದ ತೆನೆಗಳನ್ನು ಪೂಜಿಸಿ ವಿಶೇಷ ಲಕ್ಷ್ಮಿ ಪೂಜೆಯನ್ನು ನೆರವೇರಿಸಿ ನೆರೆ ಕಟ್ಟಿ ದೇವಾಲಯದ ಗರ್ಭಗುಡಿ ಸೇರಿದಂತೆ ವಿವಿಧ ಕಡೆ ಪ್ರಥಮವಾಗಿ ಕದಿರು ಕಟ್ಟಲಾಯಿತು.
ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅರ್ಚಕರು ಕದಿರನ್ನು ವಿತರಿಸಿದರು. ಅನಂತರ ಭಕ್ತಾದಿಗಳು ಕದಿರನ್ನು ಹೊತ್ತು ಪೊಲಿಪೊಲಿ ದೇವಾ ಉದ್ಘೋಷದೊಂದಿಗೆ ತಮ್ಮ ತಮ್ಮ ಮನೆಗೆ ತೆರಳಿ ಮಕ್ಕಳು ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹುತ್ತರಿಯ ಅಂಗವಾಗಿ ಪಟಾಕಿಗಳ ಅಬ್ಬರ ಜೋರಾಗಿ ಮನೆಮನೆಗಳಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮಾರ್ದನಿಸಿತು.