ಕನ್ನಡಪ್ರಭ ವಾರ್ತೆ ತುಮಕೂರುಗೊರೂರು ಜಲಾಶಯದಿಂದ ಹರಿದು ಬರುತ್ತಿರುವ ಹೇಮಾವತಿ ನೀರು ತುಮಕೂರಿನಿಂದ ಹಾದು ಕುಣಿಗಲ್‌ಗೆ ಹರಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ವೀಕ್ಷಿಸಿದರು.ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಕುಣಿಗಲ್ ದೊಡ್ಡ ಕೆರೆ ಬಳಿಯ ಚಾನಲ್ ಗೇಟ್ ತೆರೆದರೆ ಈಗಾಗಲೇ ಆಧುನಿಕರಣಗೊಂಡಿರುವ ಚಾನಲ್ 192 ಕಿ.ಮೀ. ನಿಂದ ಕುಣಿಗಲ್‌ನ ಹುತ್ತರೀದುರ್ಗ ಮತ್ತು ಹುಲಿಯೂರುದುರ್ಗಕ್ಕೂ ಹೇಮಾವತಿ ನೀರನ್ನು ಹರಿಸಬಹುದು ಎಂದರು.ಕಳೆದ ಜುಲೈ ಆರಂಭದಿಂದಲೇ ಜಿಲ್ಲೆಗೆ ನೀರು ಹರಿದಿದ್ದರೆ, ಜಿಲ್ಲೆಯ ಪಾಲಿನ 25 ಟಿ.ಎಂ.ಸಿ.ಯಲ್ಲಿ ಕುಣಿಗಲ್ ಹಂಚಿಕೆಯ 3 ಟಿ.ಎಂ.ಸಿ.ಪೂರ್ಣ ಪ್ರಮಾಣದ ನೀರು ಹರಿಸಬಹುದಾಗಿತ್ತು. ನಂತರ ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ, ತುಮಕೂರು ನಗರ ಹಾಗೂ ಗ್ರಾಮಾಂತರ, ಕೊರಟಗೆರೆ, ಮಧುಗಿರಿ ಶಿರಾಗಳ ಬಹುತೇಕ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿತ್ತು ಎಂದರು.ಹೇಮಾವತಿ ನೀರನ್ನು ಪ್ರತಿ ವರ್ಷದ ಮಳೆಗಾಲ ಪ್ರಾರಂಭಗೊಂಡ ನಂತರ ಸುಮಾರು 8 ರಿಂದ 10 ಟಿ.ಎಂ.ಸಿ. ನೀರು ಸಂಗ್ರಹವಾದ ನಂತರ ಗೊರೂರು ಜಲಾಶಯದಿಂದ ನೀರನ್ನು ಆಧುನೀಕರಣಗೊಂಡ ನಾಲೆಯ ಮೂಲಕ ತುಮಕೂರು ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಹರಿಸಿದರೆ, ಜಿಲ್ಲೆಯ ಕೊನೆಯ ಭಾಗವಾದ ಕುಣಿಗಲ್ ಗೆ ಸರ್ಕಾರ ನಿಗದಿಪಡಿಸಿರುವ 3 ಟಿ.ಎಂ.ಸಿ. ನೀರನ್ನು ಸಂಪೂರ್ಣವಾಗಿ ಹರಿಸಲು ಸಾಧ್ಯವಾಗುತ್ತದೆ ಎಂದರು.
ಇದರಿಂದ ಗುಬ್ಬಿ ಬಳಿಯ ರಾಂಪುರದಿಂದ ಕುಣಿಗಲ್-ಮಾಗಡಿ ಭಾಗಕ್ಕೆ 12 ಅಡಿ ವಿನ್ಯಾಸದ ಬೃಹತ್ ಪೈಪ್ ಅಳವಡಿಸಿ, ಹೇಮಾವತಿ ನೀರು ಹರಿಸುವ 34.5 ಕಿ.ಮೀ. ಹೇಮಾವತಿ ಎಕ್‌ಪ್ರೆಸ್ ಲಿಂಕ್ ಕೆನಾಲ್ ಸುಮಾರು ಒಂದು ಸಾವಿರ ಕೋಟಿ ರೂ.ಗಳ ಶ್ರೀರಂಗ ಏತ ನೀರಾವರಿ ಯೋಜನೆ ಅವಶ್ಯಕತೆ ಬೇಡವಾಗುತ್ತದೆ ಎಂದರು.ಇದೊಂದು ಅವೈಜ್ಞಾನಿಕ ಹಾಗೂ ಜನ ವಿರೋಧಿ ಯೋಜನೆಯಾಗಿದ್ದು , ತುಮಕೂರು ಜಿಲ್ಲೆಯ ಜನ-ಜಾನುವಾರು, ಕೈಗಾರಿಕಾಭಿವೃದ್ಧಿ, ಶ್ಯೆಕ್ಷಣಿಕ ಕ್ಷೇತ್ರವೂ ಸೇರಿದಂತೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾರಕವಾಗಿ, ಮರಣಶಾಸನವಾಗಿದೆ. ಕುಣಿಗಲ್-ಮಾಗಡಿಗೆ ಎಕ್ಸ್‌ಪ್ರೆಸ್ ಲಿಂಕ್ ಕೆನಲ್ ಯೋಜನೆ ಸ್ಥಗಿತಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಹೇಮಾವತಿ ಎಕ್ಸ್ ಪ್ರೆಸ್ಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ತುಮಕೂರು ಜಿಲ್ಲಾ ಸಮಿತಿಯ ಪ್ರಮುಖರಾದ ಪಂಚಾಕ್ಷರಯ್ಯ, ಧನಿಯಾಕುಮಾರ್, ಸ್ಥಳೀಯರಾದ ಆಕಾಶ್, ಶಶಾಂತ್ ಇದ್ದಾರೆ.