ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತಾಲೂಕಿನ ರೈತರು ಕೃಷಿ ಜತೆಗೆ ಉಪ ಕಸುಬು ಆಗಿ ಮೀನು ಸಾಕಾಣಿಕೆ ಮಾಡಲು ತಮ್ಮ ಜಮೀನುಗಳಲ್ಲಿ ಕೆರೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಮೀನು ಮರಿಗಳನ್ನು ತರಲು ಹರಸಾಹಸ ಪಡುತ್ತಿದ್ದಾರೆ.ಹೌದು, ಮೀನು ಸಾಕಾಣಿಕೆ ಮತ್ತು ಉತ್ಪಾದನೆಗಾಗಿ ಮೀನು ಮರಿಗಳನ್ನು ತರಲು ದೂರದ ಮುನಿರಾಬಾದ್, ತುಂಗಭದ್ರಾ ಡ್ಯಾಂ, ಶಿವಪುರ, ಶಿವಮೊಗ್ಗ, ಕೊಪ್ಪಳಕ್ಕೆ ಹೋಗಬೇಕಾದ ಸ್ಥಿತಿ ಇದೆ. ಮೀನು ಮರಿಗಳು ಇದೇ ಭಾಗದಲ್ಲೇ ರೈತರಿಗೆ ಸಿಗಬೇಕೆಂಬ ಉದ್ದೇಶದಿಂದ ತಾಲೂಕಿನ ಹಗರನೂರು ಗ್ರಾಮದ ಕೆರೆ ದಂಡೆಯಲ್ಲೇ ಮೀನು ಮರಿ ಉತ್ಪಾದನೆ ಕೇಂದ್ರವನ್ನು, 1979-80ರ ಬರಗಾಲ ಪೀಡಿತ ಯೋಜನೆ (ಡಿಪಿಎಪಿ) ಅಡಿಯಲ್ಲಿ ಅಂದಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ, ಗುರುಸಿದ್ದಪ್ಪ ಹೆಚ್ಚು ಆಸಕ್ತಿ ವಹಿಸಿ 2 ಎಕ್ರೆ ಸರ್ಕಾರಿ ಜಾಗದಲ್ಲಿ ಮೀನು ಮರಿ ಉತ್ಪಾದನೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದರು.
ಈ ಮೀನುಮರಿ ಉತ್ಪಾದನೆ ಕೇಂದ್ರಕ್ಕೆ ಅನುದಾನದ ಇಲ್ಲದ್ದು, ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಕೇಂದ್ರ ಅಕ್ಷರಶಃ ಪಾಳು ಬಿದ್ದಿದೆ. ಇದರ ಮರು ನಿರ್ಮಾಣಕ್ಕಾಗಿ ಕೆಕೆಆರ್‌ಡಿಬಿ ಯೋಜನೆ ಅಡಿ ₹2 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.ಮೀನು ಮರಿ ಉತ್ಪಾದನೆ ಕೇಂದ್ರದಲ್ಲಿ ಮೀನು ಕೊಳ ದುರಸ್ತಿ, ಹೊಸ ಮೀನು ಕೊಳಗಳ ನಿರ್ಮಾಣ, ಚರಂಡಿ ಮತ್ತು ತಡೆಗೋಡೆ ನಿರ್ಮಾಣ, ಹೊಸದಾಗಿ ಹ್ಯಾರಿಚರಿಗಳ ನಿರ್ಮಾಣ, ಪ್ಯಾಕಿಂಗ್ ಶೆಡ್, ಮೀನು ಮರಿ ಉತ್ಪಾದನೆ ಚೇಂಬರ್, ಕಂಡೀಷನ್ ಕೊಳ, ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ಕಾಮಗಾರಿ ಮಾಡಲು ₹2 ಕೋಟಿ ಕ್ರಿಯಾ ಯೋಜನೆ ಸಿದ್ಧವಾಗಿದೆ. ಅನುದಾನಕ್ಕಾಗಿ ಇಲಾಖೆ ಎದುರು ನೋಡುತ್ತಿದೆ.
ತಾಲೂಕಿನಲ್ಲಿ ಮೀನು ಸಾಕಾಣಿಕೆಗಾಗಿ ಉತ್ತೇಜನ ನೀಡಲು ಇಲಾಖೆ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಿದರೆ, ಈ ಭಾಗದ ಮೀನು ಸಾಕಾಣಿಕೆ ಮಾಡುವ ರೈತರಿಗೆ ಅನುಕೂಲವಾಗಲಿದೆ. ಮೀನಿಗೆ ಬಹಳಷ್ಟು ಬೇಡಿಕೆ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಮೀನು ಉತ್ಪಾದನೆಯಾಗುತ್ತಿಲ್ಲ. ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ಕೇಂದ್ರ ಆರಂಭಿಸಿ ರೈತರಿಗೆ ಸೌಲಭ್ಯಗಳನ್ನು ಒದಗಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.ನದಿಯಲ್ಲಿ ಮೀನು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಾರಣ ಮೀನುಗಾರಿಕೆ ಮಾಡುವ ಮೀನುಗಾರರು ಅತಿ ಸಣ್ಣ ಮೀನುಗಳನ್ನು ಹಿಡಿಯುತ್ತಿದ್ದಾರೆ. ಇದನ್ನು ತಡೆಯಲು ಇಲಾಖೆ ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಜತೆಗೆ ಸರ್ಕಾರ ಸಕಾಲದಲ್ಲಿ ನದಿಗೆ ಮೀನು ಮರಿಗಳನ್ನು ಬಿಟ್ಟು ಉತ್ಪಾದನೆ ಹೆಚ್ಚಿಸಬೇಕಿದೆ ಎಂದು ರೈತರು ಮನವಿ ಮಾಡುತ್ತಿದ್ದಾರೆ.
ಹಗರನೂರು ಗ್ರಾಮದಲ್ಲಿನ ಮೀನು ಮರಿ ಉತ್ಪಾದನೆ ಕೇಂದ್ರವನ್ನು ಮರು ನಿರ್ಮಾಣ ಮಾಡಲು, ಕೆಕೆಆರ್‌ಡಿಬಿ ಅನುದಾನಡಿ ₹2 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಬಂದ ಕೂಡಲೇ ಕಾಮಗಾರಿ ಆರಂಭಿಸುತ್ತೇವೆ. ಇದರಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಮೀನುಗಾರಿಕೆ ಉಪ ನಿರ್ದೇಶಕ ಬಿ.ಮಲ್ಲೇಶ.