ನವರಾತ್ರಿ ವಿಶೇಷ: ಉಡುಪಿ ಜಿಲ್ಲೆಯಲ್ಲಿ ಹೂವಿನಕೋಲು ಆಚರಣೆ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ನವರಾತ್ರಿ ಸ್ಪೆಷಲ್ಲ್‌- ಹೂವಿನಕೋಲು ವಿಶಿಷ್ಟ ಆಚರಣೆ
ರಾಂ ಅಜೆಕಾರು ಕನ್ನಡಪ್ರಭ ವಾರ್ತೆ ಕಾರ್ಕಳ ನವರಾತ್ರಿ ಬಂತೆಂದರೆ ತುಳುನಾಡಿನಲ್ಲಿ ಹಬ್ಬದ ವಾತಾವರಣ. ದೇವಾಲಯಗಳಲ್ಲಿ ಪೂಜಾಕೈಂಕರ್ಯಗಳು ನಡೆಯುತ್ತಿರುತ್ತವೆ. ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕರಾವಳಿ ಭಾಗದ ಕುಂದಾಪುರ, ಬ್ರಹ್ಮಾವರ, ಹೆಬ್ರಿ ,ಬೈಂದೂರಿನ‌ ಕೆಲವು ಭಾಗಗಳಲ್ಲಿ ಅಪರೂಪವಾಗಿ ‘ಹೂವಿನ ಕೋಲು’ ಎಂಬ ವಿಶೇಷವಾದ ಆಚರಣೆ ಕಾಣಸಿಗುತ್ತದೆ. ಮಂದಾರ್ತಿ ಮೇಳದ ಮಹಾಬಲ ನಾಯ್ಕ್‌ ಈ ಹೂವಿನ ಕೋಲು ಆಚರಣೆಯಲ್ಲಿ ಸುಮಾರು 40 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ‌. ಯಕ್ಷಗಾನದ ಋತುವಿನಲ್ಲಿ ಯಕ್ಷಗಾನ ಪ್ರಸಂಗಗಳು, ಉಳಿದ ಸಮಯದಲ್ಲಿ ಚಿಕ್ಕ ಮೇಳ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೂವಿನ ಕೋಲು ಆಚರಿಸುತ್ತಾರೆ. ಆಚರಣೆ ಹೇಗೆ: ನವರಾತ್ರಿಯ ಹತ್ತು ದಿವಸ ಮಾತ್ರ ಹೂವಿನ‌ಕೋಲು ತಂಡದ ತಿರುಗಾಟವಾಗಿದೆ. ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಈ ಹೂವಿನ ಕೋಲು ತಂಡ ಮನೆಮನೆಗೆ ಭೇಟಿ ನೀಡುತ್ತದೆ. ನವರಾತ್ರಿಯ ಮೊದಲ ದಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೂವಿನ ಕೋಲು ತಂಡ ಮನೆಮನೆ ಸುತ್ತುವ ಕಾರ್ಯಕ್ರಮ ಆರಂಭವಾಗುತ್ತದೆ‌. ನಾಲ್ಕೈದು ಜನರ ತಂಡ ಹಾರ್ಮೋನಿಯಂ, ಹೂವಿನ ಕೋಲು, ಮೃದಂಗವನ್ನು ಹಿಡಿದು ಬಿಳಿ ಬಟ್ಟೆ, ಖಾಕಿ ಚಡ್ಡಿ ತೊಟ್ಟು , ತಲೆಗೆ ಬಿಳಿ ಬಣ್ಣದ ಟೋಪಿ ಧರಿಸಿ ಕೈಯಲ್ಲಿ ಅಲಂಕೃತ ಹೂವಿನ ಕೋಲು ಹಿಡಿದು ಮನೆಮನೆಗೆ ಹೋಗಿ ಹತ್ತು ನಿಮಿಷದ ಪ್ರಸಂಗವನ್ನು ತೋರಿಸುತ್ತಾರೆ. ಅದರ ಜೊತೆ ವೀಳ್ಯದೆಲೆ, ಅಡಕೆ, ಅಕ್ಕಿ ಜೊತೆ ಸಂಭಾವನೆ ನೀಡುವುದು ವಾಡಿಕೆಯಾಗಿದೆ. ರಾಮಾಯಣ, ಮಹಾಭಾರತ, ಕೃಷ್ಞ ಪುರಾಣ ಸೇರಿದಂತೆ ಕಥೆಗಳನ್ನು ಹೂವಿನ ಕೋಲಿನ ಸಂದರ್ಭದಲ್ಲಿ ತಿಳಿಸುತ್ತಾರೆ. ಬಳಿಕ ದಸರಾದ ಕೊನೆಯ ದಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಂಗಳ ಹಾಡಲಾಗುತ್ತದೆ. ಈ ಹೂವಿನ ಕೋಲು ಯಕ್ಷಗಾನದ ಒಂದು ಪ್ರಕಾರವಾಗಿದೆ ಎನ್ನುತ್ತಾರೆ ಬುಕ್ಕಿಗುಡ್ಡೆ ಮಹಾಬಲ ನಾಯ್ಕ್‌. ಶಾಲೆಗೆ ರಜೆ ಇದ್ದಾಗ ವಿದ್ಯಾರ್ಥಿಗಳು ಸಿಗುತ್ತಾರೆ. ಉಳಿದ ಸಮಯದಲ್ಲಿ ಮೇಳದ ಮಕ್ಕಳು ಸಿಗುತ್ತಾರೆ. ಅಧಿಕ ಮಳೆ ಇರುವಾಗ ವರ್ಷವಿಡೀ ಯಕ್ಷಗಾನದ ಬಯಲಾಟಗಳು ಕಷ್ಟ. ಅದಕ್ಕಾಗಿ ಮೇ ತಿ೦ಗಳಿನಲ್ಲಿ ಬಯಲಾಟದ ಮೇಳಗಳೆಲ್ಲ ತಮ್ಮ ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಮತ್ತೆ ನವೆ೦ಬರಿನಲ್ಲಿ ಪುನಃ ತಿರುಗಾಟಕ್ಕೆ ಹೊರಡುತ್ತವೆ. ಮಳೆಗಾಲದ ಈ 6 ತಿ೦ಗಳ ಅವಧಿಯಲ್ಲಿ ಕಲಾವಿದರಿಗೆ ಇತ್ತ ಯಕ್ಷಗಾನವೂ ಇಲ್ಲದೇ ಅತ್ತ ಕುಲಕಸುಬನ್ನೂ ನಡೆಸಲಾಗದೇ, ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಇ೦ತಹ ಸ೦ದರ್ಭಗಳಲ್ಲಿ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ತಾಳಮದ್ದಲೆ, ಹೂವಿನಕೋಲು ಮತ್ತು ಚಿಕ್ಕಮೇಳಗಳನ್ನು ನೆಚ್ಚಿಕೊಂಡಿರುತ್ತಾರೆ. ಮಕ್ಕಳಿಗೆ ಸಂಸ್ಕೃತಿಯ ಅಭಿರುಚಿ: ಈ ಹೂವಿನ ಕೋಲು ಆಚರಣೆ ಸಂಸ್ಕೃತಿಯ ಉಳಿವಿಗೆ ಕಾರಣವಾಗುತ್ತದೆ.ವಿದ್ಯಾರ್ಥಿಗಳಿಗೆ ಓದು, ಏಕಾಗ್ರತೆ, ಭಾಷೆಯ ಮೇಲೆ ಹಿಡಿತ, ನಿರರ್ಗಳ ಮಾತು , ವಾಕ್ಚಾತುರ್ಯ ಹೆಚ್ಚಲು ಸಹಕಾರಿಯಾಗಿದೆ. ರಜೆ ಸಮಯದಲ್ಲಿ ಶಾಲಾ ಮಕ್ಕಳು ಹೂವಿನ ಕೋಲು ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಾರೆ.ರಜೆ ಇಲ್ಲದಿದ್ದರೆ ಯಕ್ಷಗಾನ ಮೇಳದವರೇ ಭಾಗವಹಿಸುವುದು ಸಾಮಾನ್ಯ ಎನ್ನುತ್ತಾರೆ ಮಹಾಬಲ ನಾಯ್ಕ್ ಮೊದಲು ಕಾಳಿಂಗ ನಾವಡ, ಬೆಳಿಂಜೆ ತಿಮ್ಮಪ್ಪ ನಾಯ್ಕ ,ವಂಡಾರು ಬಸವ ಮೊದಲಾದವರು ಯಕ್ಷಗಾನದ ಜೊತೆ ಹೂವಿನ ಕೋಲು ಆಟವನ್ನು ಮುಂದುವರಿಸಿಕೊಂಡು ಬಂದಿದ್ದರು.

Share this article