ತುರುವೇಕೆರೆ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ನಾನೇ ಕ್ಯಾಂಡಿಡೇಟ್ ಆಗಲಿದ್ದೇನೆ ಎಂದು ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಬಾಂಬ್ ಸಿಡಿಸಿದ್ದಾರೆ.
ಚಿಕ್ಕೋನಹಳ್ಳಿ ಬಳಿ ಇರುವ ಅವರ ಫಾರಂ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಷ್ಠೇ ಸತ್ಯ ಎಂದು ಮಸಾಲಾ ಜಯರಾಮ್ ಕಡ್ಡಿ ತುಂಡು ಮಾಡಿದಂತೆ ಹೇಳಿದರು.ತಮಗೆ ರಾಷ್ಟ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೀನೇ ಅಭ್ಯರ್ಥಿಯಾಗಬೇಕೆಂದು ಹುಕುಂ ಹೊರಡಿಸಿದ್ದಾರೆ. ಹಾಗಾಗಿ ನಾನು ಪಕ್ಷ ಸಂಘಟನೆಯನ್ನೂ ಮಾಡುವೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯನ್ನೂ ಮಾಡುವೆ ಎಂದು ಮಸಾಲಾ ಜಯರಾಮ್ ಹೇಳಿದರು.ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಿರಲಿಲ್ಲ. ಈಗ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಇನ್ನಿತರೇ ಸ್ಥಳೀಯ ಚುನಾವಣೆಗಳು ಬರಲಿವೆ. ಹಾಗಾಗಿ ನಮ್ಮ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಬೇಕಿದೆ. ಹಾಗಾಗಿ ತಾವು ಇಂದಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದರು.
ಚುನಾವಣೆಗೆ ರೆಡಿ:
ವಿಧಾನಸಭೆ ಚುನಾವಣೆಯೂ ಸಹ ಬೇಗನೇ ಬರಬಹುದು. ಸಿಎಂ ಕುರ್ಚಿ ಕದನದಲ್ಲಿ ಯಾವುದೇ ಕ್ಷಣ ಈ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಬಹುದು. ಯಾವುದೇ ಕ್ಷಣದಲ್ಲಿ ಚುನಾವಣೆ ಬರಬಹುದು. ಹಾಗಾಗಿ ಬಿಜೆಪಿ ಕಾರ್ಯಕರ್ತರು ಚುನಾವಣೆ ಎದುರಿಸಲು ಸನ್ನದ್ಧರಾಗಿ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಕಾರ್ಯಕರ್ತರಿಗೆ ಕರೆ ನೀಡಿದರು.
ಘೋಷಿಸಿಲ್ಲ:
ಇತ್ತೀಚೆಗೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪನವರ ಹುಟ್ಟುಹಬ್ಬದಂದು ಎಂ.ಟಿ. ಕೃಷ್ಣಪ್ಪನವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಮುಂಬರುವ ವಿಧಾನಸಭಾ ಚುನಾವಣೆಗೆ ತಾವೇ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿರುವುದರಿಂದ ತಾವು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ಸಂಸದ ವಿ.ಸೋಮಣ್ಣನವರು ಎಂ.ಟಿ.ಕೃಷ್ಣಪ್ಪನವರಿಗೆ ಮಂತ್ರಿಯಾಗುವ ಕನಸಿದೆ. ಅದು ಈಡೇರಲಿ ಎಂದು ಪರೋಕ್ಷವಾಗಿ ಮುಂಬರುವ ಚುನಾವಣೆಯಲ್ಲೂ ಎಂ.ಟಿ.ಕೃಷ್ಣಪ್ಪನವರೇ ಸ್ಪರ್ಧಿಸಲಿ ಎಂದು ಹೇಳಿದ್ದರು. ಇದರಿಂದ ಗೊಂದಲಕ್ಕೆ ಈಡಾಗಿದ್ದ ಬಿಜೆಪಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಮಸಾಲಾ ಜಯರಾಮ್ ಟಿಕೇಟ್ ಯಾರಿಗೂ ಘೋಷಣೆ ಆಗಿಲ್ಲ. ಎಂ.ಟಿ.ಕೃಷ್ಣಪ್ಪನವರು ವೈಯಕ್ತಿಕವಾಗಿ ಘೋಷಣೆ ಮಾಡಿಕೊಂಡಿರಬಹುದು. ಅವರು ಹೇಗೆ ತಮ್ಮ ಪಕ್ಷ ಸಂಘಟನೆ ಮಾಡುತ್ತಿದ್ದಾರೋ ಹಾಗೆಯೇ ನಾವೂ ಸಹ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ನಮ್ಮ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುವುದೋ ಕಾದು ನೋಡೋಣ ಎಂದು ಮಸಾಲಾ ಜಯರಾಮ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮಂಡಲ ಅಧ್ಯಕ್ಷ ಕಲ್ಕೆರೆ ಮೃತ್ಯುಂಜಯ, ಹಿರಿಯ ಬಿಜೆಪಿ ಮುಖಂಡರಾದ ಅರಳೀಕೆರೆ ಶಿವಯ್ಯ, ಉಗ್ರಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಆಶಾ ರಾಜಶೇಖರ್, ಚಿದಾನಂದ್, ಶೀಲಾ ಶಿವಪ್ಪ, ಬುಗುಡನಹಳ್ಳಿ ಕೃಷ್ಣಮೂರ್ತಿ, ಸೋಮೇನಹಳ್ಳಿ ಜಗದೀಶ್, ಪ್ರಸಾದ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಚೂಡಾಮಣಿ, ಜಿಲ್ಲಾ ಎಸ್ಟಿ ಘಟಕದ ಕಾರ್ಯದರ್ಶಿ ಉಮಾ ರಾಜ್, ಶೋಭಾ, ದಬ್ಬೇಘಟ್ಟ ಮಹೇಶ್, ನವೀನ್ ಬಾಬು, ಜಗದೀಶ್, ಕಾರ್ಯದರ್ಶಿ ಪ್ರಕಾಶ್ ಉಪಸ್ಥಿತರಿದ್ದರು. 2 ಟಿವಿಕೆ 1 – ತುರುವೇಕೆರೆಯ ಮಾಜಿ ಶಾಸಕ ಮಸಾಲಾ ಜಯರಾಮ್ ಪತ್ರಿಕಾಗೋಷ್ಠಿ ನಡೆಸಿದರು.