ಹಾನಗಲ್ಲ: ನಾನೂ ಮಂತ್ರಿ ಸ್ಥಾನದ ಆಕಾಂಕ್ಷಿ. ಹಾವೇರಿ ಜಿಲ್ಲೆಗೆ ಆದ್ಯತೆ ನಮ್ಮ ಒತ್ತಾಯ. ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ. ಅದು ವಿರೋಧ ಪಕ್ಷಗಳ ಸೃಷ್ಟಿ ಅಷ್ಟೇ. ನಾವು ಹೈಕಮಾಂಡ್ ಆದೇಶಕ್ಕೆ ಬದ್ಧರು ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಸೋಮವಾರ ಹಾನಗಲ್ಲಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎರಡು ಬಾರಿ ವಿಧಾನಪರಿಷತ್ ಸದಸ್ಯನಾಗಿ, ಎರಡು ಬಾರಿ ಶಾಸಕನಾಗಿ ಆಯ್ಕೆಯಾದ ನನಗೆ ಮಂತ್ರಿಯಾಗುವ ಅಪೇಕ್ಷೆ ಇದೆ. ಯುವ ಕಾಂಗ್ರೆಸ್ ಮೂಲಕ ಪಕ್ಷದಲ್ಲಿ ಗುರುತಿಸಿಕೊಂಡವನು ನಾನು. ನನ್ನ ಕ್ರಿಯಾಶೀಲತೆ ಅಭಿವೃದ್ಧಿ ಪರ ಚಿಂತನೆಗಳು ನಮ್ಮ ಹಿರಿಯರಿಗೆ ಗೊತ್ತಿದೆ. ಆದರೆ ಹೈಕಮಾಂಡ್ ನಿರ್ಣಯಕ್ಕೆ ಬದ್ಧನಾಗಿ ಕಾಂಗ್ರೆಸ್ ನಿಷ್ಠಾವಂತನಾಗಿ ಪಕ್ಷದ ನಿರ್ದೇಶನ ಪಾಲಿಸುವವ ನಾನಾಗಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಕ್ಕಿಆಲೂರಿಗೆ ಬಂದಾಗ ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದು ಪರೋಕ್ಷವಾಗಿ ನುಡಿದಿದ್ದಾರೆ. ಹೀಗಾಗಿ ನನಗೆ ಇನ್ನಷ್ಟು ವಿಶ್ವಾಸ ಮೂಡಿದೆ. ಹಾವೇರಿ ಜಿಲ್ಲೆಯಲ್ಲಿ ಪ್ರಬಲ ಬಿಜೆಪಿ ನಾಯಕರನ್ನು ಹಿಮ್ಮೆಟ್ಟಿಸಿ ಇಡೀ ಜಿಲ್ಲೆಯ ಆರೂ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿರುವಾಗ ಹಾವೇರಿ ಜಿಲ್ಲೆಗೆ ಮಂತ್ರಿ ಸ್ಥಾನ ಬೇಕೆಂದು ಕೇಳುವುದರಲ್ಲಿ ತಪ್ಪೇನಿದೆ. ಹಾವೇರಿ ಜಿಲ್ಲೆಯ ಎಲ್ಲ ಶಾಸಕರ ಒಟ್ಟಾಭಿಪ್ರಾಯ ಇದಾಗಿದೆ. ಇದರ ನಡುವೆ ಮಂತ್ರಿಯಾಗಬೇಕೆನ್ನುವವರು ಪ್ರಯತ್ನ ಮಾಡುತ್ತಿರುತ್ತಾರೆ. ವಿಧಾನ ಪರಿಷತ್ ಸದಸ್ಯ ಸಲೀಂಅಹ್ಮದ ಅವರು ಕೂಡಾ ಮಂತ್ರಿಯಾಗುವ ಅಪೇಕ್ಷೆ ಹೊಂದಿದ್ದಾರೆ. ಅದರಲ್ಲಿ ನಾನೂ ಒಬ್ಬ ಅಷ್ಟೇ. ಜಿಲ್ಲೆಯ ಯಾವುದೇ ಶಾಸಕರು ಮಂತ್ರಿಯಾದರೂ ಮೊದಲು ಖುಷಿ ಪಡುವವನು ನಾನು. ಒಟ್ಟಾಗಿ ಕೆಲಸ ಮಾಡುತ್ತೇವೆ. ಒಂದು ವರ್ಷದಿಂದ ಜಿಲ್ಲೆಗೆ ಪ್ರಾತಿನಿದ್ಯ ಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದರು.ನಮ್ಮಲ್ಲಿ ಬಣ ರಾಜಕಾರಣದ ಪ್ರಶ್ನೆಯೇ ಇಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟದ್ದು. ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇಬ್ಬರನ್ನೂ ಭೇಟಿ ಮಾಡಿ ಹಾವೇರಿ ಜಿಲ್ಲೆಗೆ ಮಂತ್ರಿ ಸ್ಥಾನ ಕೇಳಿದ್ದೇವೆ. ಇದರಲ್ಲಿ ಬಣದ ಪ್ರಶ್ನೆ ಏನು ಬಂತು. ಮಂತ್ರಿ ಮಂಡಲ ಪುನರಚನೆ ಆಗುತ್ತದೆಯೋ ಬಿಡುತ್ತದೆಯೋ ಆ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ. ಆದರೆ ಖಾಲಿ ಇರುವ ಎರಡು ಮಂತ್ರಿ ಸ್ಥಾನಗಳಲ್ಲಿ ಒಂದನ್ನು ಹಾವೇರಿ ಜಿಲ್ಲೆಗೆ ಕೊಡಿ ಎಂಬುದು ನಮ್ಮ ಹಕ್ಕೊತ್ತಾಯ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರು ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಇರುವಾಗ ಅವರಿಗೆ ಎಲ್ಲವೂ ಗೊತ್ತಿದೆ. ಪಕ್ಷದ ಹಿತಕ್ಕಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು.ಕುದುರೆ ವ್ಯಾಪಾರ ಅದು ನಮ್ಮ ಪಕ್ಷದ ಜಾಯಮಾನವಲ್ಲ. ಆಪರೇಶನ್ ಕಮಲದವರು ಅದನ್ನು ಮಾಡಿದ್ದರಿಂದ ಹೀಗೆ ಬಿಂಬಿಸುತ್ತಿದ್ದಾರೆ ಎಂದ ಅವರು ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದಂತೆ ಕೆಲಸ ಮಾಡುತ್ತೇನೆ ಎಂದರು.