ಕನ್ನಡಪ್ರಭ ವಾರ್ತೆ ಕೋಲಾರ
ಅಗತ್ಯವಾಗಿರುವ ಸೌಲಭ್ಯಗಳ ಪಟ್ಟಿ ಕೊಟ್ಟರೇ ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಸಿಎಸ್‌ಆರ್ ನಿಧಿ ಪಡೆದು ನಾ ಓದಿದ ಶಾಲೆಗಳಾದ ಬಾಲಕರ ಜೂನಿಯರ್ ಕಾಲೇಜು ಹಾಗೂ ಹಳೆ ಮಾಧ್ಯಮಿಕ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಭರವಸೆ ನೀಡಿದರು.ಸೋಮವಾರ ಕೋಲಾರದಲ್ಲಿ ತಾವು ಪ್ರಾಥಮಿಕ ಶಿಕ್ಷಣ ಪಡೆದ ನಗರದ ಬಿಇಒ ಕಚೇರಿ ಆವರಣದಲ್ಲಿರುವ ಹಳೆ ಮಾಧ್ಯಮಿಕ ಶಾಲೆ ಹಾಗೂ ಬಾಲಕರ ಪದವಿ ಪೂರ್ವ ಕಾಲೇಜಿಗೆ ದಿಢೀರ್ ಭೇಟಿ ನೀಡಿ, ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ತಾನು ಕೂರುತ್ತಿದ್ದ ಡೆಸ್ಕ್ ಮೇಲೆಯೇ ಮಕ್ಕಳೊಂದಿಗೆ ಕುಳಿತು ಕೆಲಕಾಲ ಪಾಠ ಆಲಿಸಿದ ನಂತರ ಮಾತನಾಡಿದರು.
ನಾನು ಇದೇ ಡೆಸ್ಕ್‌ನಲ್ಲೇ ಕೂರುತ್ತಿದ್ದೆ ಎಂದು ತಮ್ಮ ವಿದ್ಯಾರ್ಥಿ ಜೀವನದ ಖುಷಿಯ ಕುರಿತು ತಿಳಿಸಿದ ಅವರಿಗೆ ಬಿಇಒ ಕನ್ನಯ್ಯ ಸಾಥ್ ನೀಡಿ, ಶಿಥಿಲಗೊಂಡಿರುವ ಶಾಲೆಯ ಅಭಿವೃದ್ಧಿಗೆ ನೆರವು ನೀಡಲು ಕೋರಿದರು.ಇದೇ ವೇಳೆ ಬಿಇಒ ಕನ್ನಯ್ಯ ಮನವಿ ಮಾಡಿ, ಜಿಲ್ಲಾ ಕೇಂದ್ರದ ಬಿಇಒ ಕಚೇರಿ ೧೫೦ ವರ್ಷಗಳ ಹಳೆಯ ಕಟ್ಟಡವಾಗಿದೆ, ಇದರ ನವೀಕರಣ ಅಥವಾ ಸುಂದರ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲು ಮನವಿ ಮಾಡಿದರು.
ಬಿಇಒ ಅವರ ಮನವಿಗೆ ಸ್ಪಂದಿಸಿದ ಕೆ.ವಿ.ಪ್ರಭಾಕರ್, ಶಾಲೆಗೆ ಅಗತ್ಯವಿರುವ ಸೌಲಭ್ಯಗಳು ಬಿಇಒ ಕಚೇರಿ ನವೀಕರಣಕ್ಕೆ ಅಗತ್ಯವಾದ ಅನುದಾನದ ಕುರಿತು ಸೂಕ್ತ ಅಂದಾಜುಪಟ್ಟಿಯೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಮುಖ್ಯಮಂತ್ರಿಗಳ ಸಹಕಾರೊಂದಿಗೆ ಸಿಎಸ್‌ಆರ್‌ನಿಧಿ ಕ್ರೋಢೀಕರಿಸಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.ಪಿಯು ಕಾಲೇಜಿಗೂ ಪ್ರಭಾಕರ್ ಭೇಟಿಪ್ರಾಥಮಿಕ ಶಾಲೆ ಭೇಟಿಯ ನಂತರ ತಾವು ಓದಿದ ನಗರದ ಬಾಲಕರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಕೆ.ವಿ.ಪ್ರಭಾಕರ್ ಅವರನ್ನು ಕಾಲೇಜಿನ ಪ್ರಾಂಶುಪಾಲ ಪರುಶುರಾಮ್ ಉನ್ಕಿ ಸ್ವಾಗತಿಸಿದರು. ಇಲ್ಲಿಯೂ ತಾನು ಪ್ರೌಢಶಾಲಾ ಶಿಕ್ಷಣ ಓದಿದ ಕಾಲೇಜಿನ ಕೊಠಡಿಗಳಿಗೆ ಭೇಟಿ ನೀಡಿದ ಪ್ರಭಾಕರ್ ಈ ಕಾಲೇಜಿನ ಅಗತ್ಯತೆಗಳ ಮಾಹಿತಿ ನೀಡಿದರೆ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪರುಶುರಾಮ ಉನ್ಕಿ ಮಾಹಿತಿ ನೀಡಿ, ಇದು ೧೩೦ ವರ್ಷಗಳ ಹಳೆ ಕಟ್ಟಡವಾಗಿದೆ, ಇದರ ನವೀಕರಣದ ಅಗತ್ಯವಿದೆ ಜತೆಗೆ ಇಲ್ಲಿ ಎಲ್ಲಾ ರೀತಿಯ ಇಲಾಖಾ, ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವುದರಿಂದ ತರಗತಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಪರೀಕ್ಷಾ ಬ್ಲಾಕ್ ಕಟ್ಟಡ ನಿರ್ಮಾಣಕ್ಕೂ ಮನವಿ ಮಾಡಿದರು.ಇಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರಿಂದ ಇಲ್ಲೊಂದು ಸುಂದರ ಆಡಿಟೋರಿಯಂ ನಿರ್ಮಾಣಕ್ಕೆ ಕ್ರಮವಹಿಸಲು ಮನವಿ ಮಾಡಿದರು.
ಪ್ರಾಂಶುಪಾಲರ ಮನವಿಗೆ ಸ್ಪಂದಿಸಿದ ಪ್ರಭಾಕರ್, ಕೂಡಲೇ ಈ ಕುರಿತು ಅಗತ್ಯ ಪ್ರಸ್ತಾವನೆ ನನಗೆ ಕಳುಹಿಸಿದರೆ ಕೂಡಲೇ ಅಗತ್ಯ ಅನುದಾನ ಒದಗಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿ, ನಾನು ಓದಿದ ಶಾಲೆಗೆ ಏನಾದರೂ ಮಾಡುವ ಆಸೆ ಇದೆ, ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಕೋರಿದರು. ಮುಖಂಡರಾದ ಅನ್ವರ್, ಅಬ್ದುಲ್ ಖಯ್ಯೂಂ ಮನವಿ ಮಾಡಿ ಹಳೆ ಮಾಧ್ಯಮಿಕ ಶಾಲೆ ಆವರಣದಲ್ಲಿನ ಉರ್ದು ಶಾಲಾ ಕಟ್ಟಡವೂ ಶಿಥಿಲಗೊಂಡಿದ್ದು, ಅದನ್ನು ಸರಿಪಡಿಸಿಕೊಡಿ ಮತ್ತು ಹಾಸ್ಟೆಲ್ ಸೌಲಭ್ಯ ಒದಗಿಸಲು ಮನವಿ ಸಲ್ಲಿಸಿದರು. ಉಪಪ್ರಾಂಶುಪಾಲೆ ರಾಧಮ್ಮ, ಉಪನ್ಯಾಸಕರಾದ ಎನ್.ಕೆ. ನರಸಾಪುರ ಮಂಜುನಾಥ್, ಡಿ.ಸಿ. ಶ್ರೀನಾಥ್, ಸುಂದರ್, ಶ್ರೀನಿವಾಸ್, ಅನುಸೂಯಾ, ಮುಖಂಡರಾದ ತ್ಯಾಗರಾಜ್ ಮುದ್ದಪ್ಪ, ಪತ್ರಕರ್ತ ಚಾಂದ್‌ಪಾಷಾ ಮತ್ತಿತರರಿದ್ದರು.