ನಾನು ಧಾರ್ಮಿಕ ಸ್ಥಳದ ವಸ್ತ್ರ ಸಂಹಿತೆ ಪರ : ಸಂಸದ ಯದುವೀರ್‌

KannadaprabhaNewsNetwork |  
Published : Jul 03, 2025, 11:49 PM ISTUpdated : Jul 04, 2025, 12:31 PM IST
Yaduveer wadiyar

ಸಾರಾಂಶ

ಧಾರ್ಮಿಕ ಸ್ಥಳಗಳಲ್ಲಿ ವಸ್ತ್ರ ಸಂಹಿತೆ ಪರವಾಗಿ ನಾನು ಯಾವಾಗಲೂ ಇದ್ದೇನೆ. ಧಾರ್ಮಿಕ ಕ್ಷೇತ್ರಗಳಿಗೆ ಬಂದಾಗ ಜನರು ಧಾರ್ಮಿಕ ಭಾವನೆಯಿಂದಲೇ ಬರಬೇಕು. ಅದು ನಮ್ಮ ಸಂಸ್ಕೃತಿಯ ಭಾಗ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

  ಮೈಸೂರು :  ಧಾರ್ಮಿಕ ಸ್ಥಳಗಳಲ್ಲಿ ವಸ್ತ್ರ ಸಂಹಿತೆ ಪರವಾಗಿ ನಾನು ಯಾವಾಗಲೂ ಇದ್ದೇನೆ. ಧಾರ್ಮಿಕ ಕ್ಷೇತ್ರಗಳಿಗೆ ಬಂದಾಗ ಜನರು ಧಾರ್ಮಿಕ ಭಾವನೆಯಿಂದಲೇ ಬರಬೇಕು. ಅದು ನಮ್ಮ ಸಂಸ್ಕೃತಿಯ ಭಾಗ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ನಗರದ ಚಾಮುಂಡಿಬೆಟ್ಟಕ್ಕೆ ಗುರುವಾರ ಭೇಟಿ ನೀಡಿ ಆಷಾಢ ಶುಕ್ರವಾರದ ಸಿದ್ಧತೆ ಕುರಿತು ಪರಿಶೀಲಿಸಿ ಅವರು ಮಾತನಾಡಿದರು.

ಚಾಮುಂಡಿ ಬೆಟ್ಟದಲ್ಲೂ ವಸ್ತ್ರ ಸಂಹಿತೆ ಜಾರಿಯಾಗಬೇಕು. ಇದರಿಂದ ಬರುವ ಭಕ್ತರಿಗೂ ಸಮಸ್ಯೆ ಆಗಬಾರದು. ತಿರುಪತಿ ತಿರುಮಲ ಮಾದರಿ ಚಾಮುಂಡಿ ಬೆಟ್ಟದಲ್ಲೂ ಮೊಬೈಲ್ ನಿರ್ಬಂಧಿಸಬೇಕು. ಇತ್ತೀಚಿಗೆ ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಚಾಮುಂಡೇಶ್ವರಿ ದೇವಿಯ ಮೂಲ ವಿಗ್ರಹದ ವೀಡಿಯೋ ಮಾಡುತ್ತಿದ್ದಾರೆ. ಇದು ಧಾರ್ಮಿಕ ಕ್ಷೇತ್ರದ ಪಾವಿತ್ರತೆಗೆ ಧಕ್ಕೆ ತರುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಸೂಕ್ತ ಕಾನೂನನ್ನು ಜಾರಿಗೊಳಿಸಬೇಕು ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳು ಹಾಗು ಕೋತಿಗಳ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಹುಲಿ ಸಾವಿನ ಬಗ್ಗೆ ಚಾಮರಾಜನಗರದ ಯಾವುದೇ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಇದೊಂದು ಗಂಭೀರ ಸಮಸ್ಯೆ. ಯಾಕೆ ಅವರಿಗೆ ಅರ್ಥ ಆಗುತ್ತಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ನಾನು ಮಾತ್ರವೇ ಧ್ವನಿ ಎತ್ತುವ ಕೆಲಸ ಆಗುತ್ತಿದೆ ಎಂದರು.

ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರದ ಬಗ್ಗೆ ಕೂಡ ಸದನದಲ್ಲಿ ನಾನೊಬ್ಬನೇ ದನಿ ಎತ್ತುತ್ತಿದ್ದೇನೆ. ಚಾಮರಾಜನಗರ ಜನಪ್ರತಿನಿಧಿಗಳು ಇನ್ನಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣ ಸಂಬಂಧ ಅರಣ್ಯ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಆಗಬೇಕು. ಅರಣ್ಯ ಅಧಿಕಾರಿಗಳು ಸಭೆ ಕರೆದಾಗಲೂ ಯಾರೂ ಬರುವುದಿಲ್ಲ. ಅರಣ್ಯದ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದು ಕೊಂಡಿದ್ದಾರೆ. ಆದರೆ ನಮಗೆ ಎಲ್ಲಾ ಗೊತ್ತಿದೆ. ಚಾಮರಾಜನಗರ ಶೇ. 50ಕ್ಕೂ ಹೆಚ್ಚು ಅರಣ್ಯ ಹೊಂದಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ನಾನೇನೂ ಹೇಳಲಾರೆ. ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಮಾತನಾಡುವುದಿಲ್ಲ. ಹೈಕಮಾಂಡ್ ಸೂಕ್ತ ನಿರ್ಧಾರ ಮಾಡಲಿದೆ ಎಂದರು.

ರಾಜ್ಯದಲ್ಲಿ ಸಿಎಂ ಬದಲಾವಣೆಯು ಕಾಂಗ್ರೆಸ್ ಆಂತರಿಕ ವಿಚಾರದ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಆಂತರಿಕ ಕಚ್ಚಾಟದಿಂದ ಆಡಳಿತ ಯಂತ್ರ ಕುಸಿದಿದೆ. ಪ್ರಾಣಿಗಳ ಸಾವು, ಚಾಮುಂಡಿ ಬೆಟ್ಟದ ನಿರ್ವಹಣೆ ಸೇರಿ ಎಲ್ಲಾ ವಲಯದಲ್ಲಿ ವಿಫಲವಾಗಿದೆ. ಇದೆಲ್ಲಾ ಬಿಟ್ಟು ಸರ್ಕಾರ ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. 

ಹೆಚ್ಚುವರಿ ಎಸ್ಪಿ ಸ್ವಯಂ ನಿವೃತ್ತಿ ನಿರ್ಧಾರಕ್ಕೆ ಸಿಎಂ ನಡವಳಿಕೆಯೇ ಕಾರಣ: ಯದುವೀರ್

  ಮೈಸೂರು :  ಬೆಳಗಾವಿ ಹೆಚ್ಚುವರಿ ಎಸ್ಪಿ ಸ್ವಯಂ ನಿವೃತ್ತಿ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡವಳಿಕೆಯೇ ಕಾರಣ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.

ಸಿದ್ದರಾಮಯ್ಯ ವೇದಿಕೆಯಲ್ಲಿ ಗದರಿದ್ದ ಪೊಲೀಸ್ ಅಧಿಕಾರಿ ಸ್ವಯಂ ನಿವೃತ್ತಿ ವಿಚಾರಕ್ಕೆ ಗುರುವಾರ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲೇ ಮಾನಸಿಕವಾಗಿ ಕುಗ್ಗಿ ಅಧಿಕಾರಿ ಈ ನಿರ್ಧಾರ ಕೈಗೊಂಡಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದ್ದರೇ ಕಾನೂನೂ ಚೌಕಟ್ಟಿನಲ್ಲಿ ಕ್ರಮ ಆಗಬೇಕು. ಅದನ್ನ ಬಿಟ್ಟು ಬಹಿರಂಗವಾಗಿ ಅಧಿಕಾರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಖಂಡಿಸಿದರು.

ಇದು ನಮ್ಮ ರಾಜ್ಯ ಮಾತ್ರವಲ್ಲ, ಪ್ರಪಂಚದಲ್ಲಿ ಎಲ್ಲಿಯೂ ಆಗಬಾರದು. ಅಧಿಕಾರಿಗಳು, ಜನಪ್ರತಿನಿಧಿಗಳು ಪರಸ್ಪರ ಗೌರವ ಕೊಟ್ಟು ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಂಡ ರೀತಿ ಎಲ್ಲರೂ ನೋಡಿದ್ದಾರೆ. ಸಿದ್ದರಾಮಯ್ಯ ಅವರ ವರ್ತನೆ ಸರಿ ಇರಲಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಆದೇಶ ಪಾಲಿಸಬೇಕು. ಪಾಲಿಸದಿದ್ದರೆ ಅದನ್ನ ಕೇಳಲು ನಮಗೆ ಸಾಕಷ್ಟು ಮಾರ್ಗಗಳಿದೆ. ಅದನ್ನು ಬಿಟ್ಟು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಅವರು ಟೀಕಿಸಿದರು.

PREV
Read more Articles on