ಎರ''ವರ್ಷವಾದರೂ ಮುಖ್ಯಮಂತ್ರಿ ಒಂದು ಪೈಸೆ ಅನುದಾನ ನೀಡುತ್ತಿಲ್ಲ : ನಾನು ಕೇವಲ ಪೇಪರ್ ಎಂಎಲ್ಎ'

KannadaprabhaNewsNetwork | Updated : Jan 11 2025, 11:50 AM IST

ಸಾರಾಂಶ

ಎರಡು ವರ್ಷವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಪೈಸೆ ಅನುದಾನ ನೀಡುತ್ತಿಲ್ಲ. ಹೀಗಾಗಿ ನಾನು ಕೇವಲ ಪೇಪರ್ ಎಂಎಲ್ಎ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.

 ತುಮಕೂರು  : ಎರಡು ವರ್ಷವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಪೈಸೆ ಅನುದಾನ ನೀಡುತ್ತಿಲ್ಲ. ಹೀಗಾಗಿ ನಾನು ಕೇವಲ ಪೇಪರ್ ಎಂಎಲ್ಎ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.ತುಮಕೂರಿನ ಗೂಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ ಎಂದಿದ್ದಾರೆ. 

ಸೋಮಣ್ಣ ಅವರ ವೇಗದಲ್ಲಿ ನಾನು ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಕಾರಣ ಮುಖ್ಯಮಂತ್ರಿಗಳು ಅನುದಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಗೆ ಎರಡು ಸಾರಿ ಮುಖ್ಯಮಂತ್ರಿ ಬಂದು ಹೋದರೂ ಯಾವುದೇ ಅನುದಾನ ಕೊಟ್ಟಿಲ್ಲ ಎಂದ ಸುರೇಶಗೌಡ, ನಮ್ಮ ನಾಗವಲ್ಲಿ ಶಾಲೆಗೆ ಹಿಂದಿನ ಸರ್ಕಾರ ಎರಡು ಕೋಟಿ ಕೊಟ್ಟಿತ್ತು. ಶಂಕು ಸ್ಥಾಪನೆ ಮಾಡಿ ಹೋದ ದಿನವೇ ಸರ್ಕಾರ ಹಣವನ್ನು ವಿತ್ ಡ್ರಾ ಮಾಡಿ ಬಿಟ್ಟಿದೆ ಎಂದರು. 

ಸಿಎಂ ಬಂದಾಗ ನಾವೆಲ್ಲಾ ಕಪ್ಪು ಬಾವುಟ ತೋರಿಸುವುದಾಗಿ ಹೇಳಿದೆವು. ಆಗ ಪರಮೇಶ್ವರ್ ಅವರು 15 ಕೋಟಿ ರು. ಹಣವನ್ನು ಸರ್ಕಾರದಿಂದ ಕೊಡುವುದಾಗಿ ಹೇಳಿದ್ದರು. ಇಲ್ಲಿಯವರೆಗೂ ಒಂದು ರುಪಾಯಿ ಕೊಟ್ಟಿಲ್ಲ ಎಂದು ಹರಿಹಾಯ್ದರು. ಇವತ್ತು ನಮ್ಮ ಪರಿಸ್ಥಿತಿ ಹೇಗಿದೆ ಎಂದರೆ ಶಾಸಕರಾಗಿ ಒಂದಿಡಿ ಮಣ್ಣು ಹಾಕಿಸಲು ಆಗುತ್ತಿಲ್ಲ ಎಂದರು. 

ಅಭಿವೃದ್ದಿ ಅಂದರೆ ಪಂಚ ಭಾಗ್ಯಗಳೇ ಸರ್ಕಾರ ಆಗಿದೆ. ಬಸ್ ಚಾರ್ಜ್ ಸೇರಿದಂತೆ ಎಲ್ಲವು ದುಬಾರಿ ಆಗಿದೆ. ಎಲ್ಲದರೂ ಮೇಲೂ ಬರೆ ಹಾಕುತ್ತಿದ್ದಾರೆ. ಬಡವರಿಗೆ ಭಾಗ್ಯಗಳನ್ನು ಕೊಡುವುದಕ್ಕೆ ನಮ್ಮದೇನು ತಕರಾರಿಲ್ಲ, ಆದರೆ ಶ್ರೀಮಂತರಿಗೂ ಭಾಗ್ಯಗಳನ್ನು ಕೊಡುತ್ತಿದ್ದಾರೆ ಎಂದರು. ಬಡವರ ಹಣ ತೆಗೆದುಕೊಂಡು ಕಾಂಗ್ರೆಸ್ ಪಕ್ಷ ಕಟ್ಟುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬಂದಿದೆ ಎಂದ ವ್ಯಂಗ್ಯವಾಡಿದರು. 

ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನ್ನದು. ಅವರ ಕಾಳಜಿ, ಕಮಿಟ್ ಮೆಂಟ್ ಅನ್ನು ನಾವೆಲ್ಲಾ ಮೆಚ್ಚಲೇಬೇಕು ಎಂದರು.

Share this article