ನಾನು ಡಾಕ್ಟರ್‌ ಅಲ್ಲ, ವಕೀಲ ಮಾತ್ರ: ಸಿದ್ದರಾಮಯ್ಯ

KannadaprabhaNewsNetwork |  
Published : Oct 20, 2026, 01:15 AM IST
೧೯ಕೆಎಲ್‌ಆರ್-೧೦-೧ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ೧೦೧ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿ ತೆರಳುಯತ್ತಿರುವುದು. | Kannada Prabha

ಸಾರಾಂಶ

ಈ ಸಂಸ್ಥೆಯನ್ನು ಕಟ್ಟಿದವರು ಜಾಲಪ್ಪನವರು. ನಾನೂ ಸಂಸ್ಥಾಪಕ ಧರ್ಮದರ್ಶಿ ಆಗಿದ್ದೆ. ಆದರೆ ಸಭೆಗೆ ಬರಲಿಲ್ಲ ಎಂದು ನಿನ್ನನ್ನು ತೆಗೆದುಹಾಕುತ್ತೇನೆ ಕಣಯ್ಯ ಎಂದು ಹೇಳಿ ತೆಗೆದುಹಾಕಿದರು.

ಆರ್.ಎಲ್.ಜಾಲಪ್ಪ ಆಸ್ಪತ್ರೆ, ಸಂಶೋಧನಾ ಸಂಸ್ಥೆಯ ೧೦೧ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾಜಿ ಸಿಎಂಗೆ ಗೌರವ ಡಾಕ್ಟರೇಟ್‌ ಪ್ರದಾನ

ಕನ್ನಡಪ್ರಭ ವಾರ್ತೆ ಕೋಲಾರ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ನಗರದಲ್ಲಿ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ೧೦೧ನೇ ಸಂಸ್ಥಾಪನಾ ದಿನ ಹಾಗೂ ನೂತನ ಹಗಲು ಆರೈಕೆ ವಾರ್ಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ವೇದಿಕೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಅವರು, ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ "ನಾನು ಮಾಧ್ಯಮದವರ ಜೊತೆ ಮಾತನಾಡುವುದಿಲ್ಲ " ಎಂದು ಖಡಕ್ ಆಗಿ ಹೇಳಿ ಮುಂದೆ ಹೋದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಸಂಸ್ಥೆಯನ್ನು ಕಟ್ಟಿದವರು ಜಾಲಪ್ಪನವರು. ನಾನೂ ಸಂಸ್ಥಾಪಕ ಧರ್ಮದರ್ಶಿ ಆಗಿದ್ದೆ. ಆದರೆ ಸಭೆಗೆ ಬರಲಿಲ್ಲ ಎಂದು ನಿನ್ನನ್ನು ತೆಗೆದುಹಾಕುತ್ತೇನೆ ಕಣಯ್ಯ ಎಂದು ಹೇಳಿ ತೆಗೆದುಹಾಕಿದರು. ದಾಖಲೆ ಪ್ರಕಾರ ಮೂರು ಸಭೆ ತಪ್ಪಿಸಿಕೊಂಡರೆ ಧರ್ಮದರ್ಶಿ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ ಎಂಬ ನಿಯಮವಿದೆ ಎಂದು ಹಾಸ್ಯ ಮಾಡಿದರು.

ಜಿ.ಎಚ್.ನಾಗರಾಜ್ ಕುಟುಂಬದ ಬಗ್ಗೆ ಮಾತನಾಡಿ, ಜಿ.ಎಚ್.ನಾಗರಾಜ್ ನನ್ನ ಮಗನನ್ನು ಧರ್ಮದರ್ಶಿ ಮಾಡುತ್ತೇನೆ ಎಂದರು. ಅವರು ಬರುತ್ತಿಲ್ಲ. ಅವರು ಸಚಿವರಾಗಿದ್ದಾರೆ. ನಾಗರಾಜ್ ಸಂಸ್ಥಾಪಕ ಕಾರ್ಯದರ್ಶಿ, ಜಾಲಪ್ಪನವರು ಅಧ್ಯಕ್ಷರಾಗಿದ್ದರು. ನಾವೆಲ್ಲ ಏಳು-ಎಂಟು ಜನ ಸಂಸ್ಥಾಪಕರು ಇದ್ದೇವು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಗೌರವ ಡಾಕ್ಟರೇಟ್ ಬೇಡ, ಸಿದ್ದರಾಮಯ್ಯ ಎಂದೇ ಕರೆಯಿರಿ:

ತಮಗೆ ನೀಡಿದ ಗೌರವ ಡಾಕ್ಟರೇಟ್ ಬಗ್ಗೆ ತಮಾಷೆ ಮಾಡಿದ ಅವರು, "ನನಗೆ ಮೊದಲೇ ಗೊತ್ತಿರಲಿಲ್ಲ, ಬೇಡ ಎಂದಿದ್ದೆ. ೧೭ ಆಯವ್ಯಯ ಮಂಡಿಸಿ, ೮ ವರ್ಷ ಮುಖ್ಯಮಂತ್ರಿಯಾಗಿ ದೇವರಾಜ ಅರಸು ದಾಖಲೆ ಹಿಂದಿಕ್ಕಿದ್ದಕ್ಕೆ ನೀಡಿರಬಹುದು. ನಾನು ವೈದ್ಯನಲ್ಲ, ವಕೀಲ ಮಾತ್ರ. ಜಿ.ಎಚ್.ನಾಗರಾಜ್‌ರ ಒತ್ತಡದಿಂದ ಸಿಕ್ಕಿದೆ. ದಯವಿಟ್ಟು ಯಾರೂ ’ಡಾಕ್ಟರ್ ಸಿದ್ದರಾಮಯ್ಯ’ ಎಂದು ಕರೆಯಬೇಡಿ, ಸಿದ್ದರಾಮಯ್ಯ ಎಂದೇ ಕರೆಯಿರಿ " ಎಂದು ಮನವಿ ಮಾಡಿದರು.

ಮಾಧ್ಯಮದ ಮುಂದೆ ಮೌನಕ್ಕೆ ಕಾರಣವೇನು?:

ಇದೇ ವೇಳೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಕುಟುಕು ಕಾರ್ಯಾಚರಣೆ ವಿಡಿಯೋ ವಿವಾದದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅವರು ಪ್ರತಿಕ್ರಿಯೆ ನಿರಾಕರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋಕ್ಕೆ ತಮ್ಮ ಹೆಸರು ಜೋಡಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಬೆಂಗಳೂರು ನಗರ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕಟಣೆ, ಪ್ರಸಾರಕ್ಕೆ ತಡೆಯಾಜ್ಞೆ ಕೋರಿದ್ದಾರೆ. ನ್ಯಾಯಾಲಯ ಸೆ. ೨೭ರ ವಿಡಿಯೋ ಮತ್ತು ಅಕ್ಟೋಬರ್ ೨ರ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಿದೆ. ನನ್ನ ೫೦ ವರ್ಷದ ರಾಜಕೀಯ ಜೀವನ ತೆರೆದ ಪುಸ್ತಕ. ನಾನು ಮುಗ್ಧ, ಸತ್ಯಕ್ಕೆ ಜಯ ಸಿಗುತ್ತದೆ. ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ, ಆದರೆ ಕೆಲವು ಮಾಧ್ಯಮಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಅವರು ಹೇಳಿದರು

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿಗಳಾದ ಅನಿಲ್ ಕುಮಾರ್, ನಸೀರ್ ಅಹ್ಮದ್, ಸಚಿವ ರಾಮಲಿಂಗಾರೆಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ.27ರಂದು ಅರ್ಹರಿಗೆ ನಿವೇಶನ ಹಂಚಿಕೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಕೃತಜ್ಞತೆ ಮರೆಯಾಗಿ ಲಾಭ, ನಷ್ಟದಲ್ಲೇ ಜನರು ಜೀವನ ಕಳೆಯುತ್ತಿದ್ದಾರೆ: ರವಿಕಾಂತೇಗೌಡ